ಹೈದರಾಬಾದ್:ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ‘ಪ್ರಾಣ ಪ್ರತಿಷ್ಠಾಪನಾ’ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಶುಕ್ರವಾರ ಆಹ್ವಾನ ಪತ್ರಿಕೆ ನೀಡಲಾಯಿತು. ಚೆನ್ನೈನಲ್ಲಿರುವ ಅಶ್ವಿನ್ ನಿವಾಸದಲ್ಲಿ ಬಹು ನಿರೀಕ್ಷಿತ ರಾಮನ ದೇವಾಲಯದ ಮಹಾಮಸ್ತಕಾಭಿಷೇಕಕ್ಕೆ ಅಶ್ವಿನ್ ಅವರನ್ನು ಆಹ್ವಾನಿಸಲಾಯಿತು.
ಬಿಜೆಪಿಯ ತಮಿಳುನಾಡು ರಾಜ್ಯ ಉಪಾಧ್ಯಕ್ಷ ವೆಂಕಟರಾಮನ್ ಸಿ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿತ್ತು. ವೆಂಕಟೇಶ್ ಪ್ರಸಾದ್ ಅವರು ಟ್ವಿಟ್ಟರ್‌ನಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನದೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು.
''ನನ್ನ ಜೀವಿತಾವಧಿಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ನಡೆಯಬೇಕು ಎಂಬ ಆಸೆಯಾಗಿತ್ತು. ಅದರಂತೆ ಜನವರಿ 22 ರಂದು ಈ ಪವಿತ್ರ ಕಾರ್ಯ ನಡೆಯುತ್ತಿದೆ. ಐತಿಹಾಸಿಕ ಈ ಕ್ಷಣಕ್ಕೆ ಸಾಕ್ಷಿಯಾಗಲು ಖುಷಿಯಾಗುತ್ತಿದೆ. ಅದಕ್ಕಾಗಿ ಕಾಯುತ್ತಿದ್ದೇನೆ. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀರಾಮ್." ಎಂದು ಅವರು ಶೀರ್ಷಿಕೆ ಕೂಡ ಬರೆದಿದ್ದರು.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಭಾರತದ ಮಾಜಿ ನಾಯಕ ಎಂಎಸ್ ಧೋನಿ, ಭಾರತದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಹಲವರಿಗೂ ಆಹ್ವಾನ ನೀಡಲಾಗಿದೆ. ಇರಷ್ಟೇ ಅಲ್ಲದೇ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಕೂಡ ಭಾಗಿಯಾಗಲಿದ್ದಾರೆ. ಉದ್ಘಾಟನೆ ಬಳಿಕ ಮಹಾಪೂಜೆ ಮತ್ತು ಮಹಾ ಆರತಿ ನಡೆಯಲಿದೆ. ಉದ್ಘಾಟನೆಯ ಎರಡು ದಿನಗಳ ನಂತರ ದೇವಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.
ಈ ಐತಿಹಾಸಿಕ ಕ್ಷಣಕ್ಕೆ ಸಿನಿ ತಾರೆಯರೂ ಕೂಡ ಸಾಕ್ಷಿಯಾಗಲಿದ್ದಾರೆ. ಅಮಿತಾಭ್ ಬಚ್ಚನ್ ಆದಿಯಾಗಿ ತಾರೆಯರಾದ ಮಾಧುರಿ ದೀಕ್ಷಿತ್, ಕಂಗನಾ ರಣಾವತ್, ಆಲಿಯಾ ಭಟ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಅನುಪಮ್ ಖೇರ್, ಸಂಜಯ್ ಲೀಲಾ ಬನ್ಸಾಲಿ, ಸನ್ನಿ ಡಿಯೋಲ್, ಟೈಗರ್ ಶ್ರಾಫ್, ರಾಜ್‌ಕುಮಾರ್ ಹಿರಾನಿ, ಆಯುಷ್ಮಾನ್ ಖುರಾನಾ, ಅಜಯ್ ದೇವಗನ್, ಮಧುರ್ ಭಂಡಾರ್ಕರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಅಷ್ಟೆ ಅಲ್ಲದೇ ದಕ್ಷಿಣದ ಸೂಪರ್ ಸ್ಟಾರ್ಗಳಾದ ರಜನಿಕಾಂತ್, ಪ್ರಭಾಸ್, ಚಿರಂಜೀವಿ, ಮೋಹನ್ ಲಾಲ್, ಧನುಷ್, ಯಶ್ ಮತ್ತು ರಿಷಬ್ ಶೆಟ್ಟಿ ಅವರಿಗೂ ಕೂಡ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಐತಿಹಾಸಿಕ ಟಿವಿ ಧಾರಾವಾಹಿ ರಾಮಾಯಣದಲ್ಲಿ ರಾಮ ಮತ್ತು ಸೀತೆಯ ಪಾತ್ರಗಳನ್ನು ನಿರ್ವಹಿಸಿದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ಕೂಡ ಕಾಣಿಸಿಕೊಳ್ಳಲಿದ್ದಾರೆ.