ಸಿಡ್ನಿ(ಆಸ್ಟ್ರೇಲಿಯಾ): ಮುಂದಿನ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡದ ಆಟಗಾರರು ಹೆಚ್ಚು ದೇಶಿ ಕ್ರಿಕೆಟ್ ಆಡುವುದನ್ನು ಮುಖ್ಯ ಕೋಚ್ ಖಾತ್ರಿಪಡಿಸಿಕೊಳ್ಳಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಅದೇ ರೀತಿ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿಯೂ ದೇಶಿ ಕ್ರಿಕೆಟ್‌ನಿಂದ ಹೊರಗುಳಿಯಲು ಬಯಸುವ ಕ್ರಿಕೆಟಿಗರ ವಿರುದ್ಧ ಮುಲಾಜಿಲ್ಲದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಬ್ಯಾಟಿಂಗ್ ಲೈನಪ್‌ನಲ್ಲಿ ಕಂಡುಬಂದ ತಾಂತ್ರಿಕ ಕೌಶಲಗಳ ಕೊರತೆಗಳ ಕುರಿತು ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯವಾಗಿ, ನಾಯಕ ರೋಹಿತ್ ಶರ್ಮಾ (3 ಪಂದ್ಯ ಮತ್ತು 5 ಇನ್ನಿಂಗ್ಸ್‌ನಲ್ಲಿ 6.20ರ ಸರಾಸರಿಯಲ್ಲಿ 31 ರನ್), ವಿರಾಟ್ ಕೊಹ್ಲಿ (5 ಪಂದ್ಯ ಮತ್ತು 9 ಇನ್ನಿಂಗ್ಸ್‌ನಲ್ಲಿ 23.75ರ ಸರಾಸರಿಯಲ್ಲಿ 190 ರನ್) ಇಬ್ಬರೂ ಕೂಡಾ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ವಿಫಲರಾಗಿದ್ದರು. ವಿರಾಟ್ ಕೊಹ್ಲಿ ಇಡೀ ಟೂರ್ನಿಯಾದ್ಯಂತ ಔಟ್‌ಸೈಡ್ ಆಫ್ ಸ್ಟಂಪ್‌ನಲ್ಲೇ ಆಸೀಸ್ ಆಟಗಾರರಿಗೆ ಸುಲಭವಾಗಿ ವಿಕೆಟ್ ನೀಡಿ ಪೆವಿಲಿಯನ್ ಸೇರುತ್ತಿದ್ದರು. ವೇಗದ ಬೌಲರ್ ಸ್ಕಾಟ್ ಬಾಲೆಂಡ್ ಕೊಹ್ಲಿಯನ್ನು ನಾಲ್ಕು ಬಾರಿ ಔಟ್ ಮಾಡಿದ್ದರು ಎಂಬುದು ಗಮನಾರ್ಹ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಜೊತೆ ಭಾರತದ ಬ್ಯಾಟಿಂಗ್ ವೈಫಲ್ಯದ ಕುರಿತು ಮಾತನಾಡಿದ ಗವಾಸ್ಕರ್, "ನಾನು ಭಾರತೀಯ ಬ್ಯಾಟರ್‌ಗಳಲ್ಲಿ ತಾಂತ್ರಿಕ ಕೊರತೆಗಳನ್ನು ಕಂಡೆ. ಮಾಡಿದ ತಪ್ಪನ್ನೇ ಅವರು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಇದೊಂದೇ ಸರಣಿಯನ್ನು ಉದ್ದೇಶಿಸಿ ನಾನು ಮಾತನಾಡುತ್ತಿಲ್ಲ. ಇದಕ್ಕೂ ಹಿಂದಿನ ನ್ಯೂಜಿಲೆಂಡ್ ಸರಣಿಯ ಕುರಿತು ಕೂಡಾ ಮಾತನಾಡುತ್ತಿದ್ದೇನೆ. ನೀವು ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ಹೇಗೆ ಆಡಿದ್ದೀರಿ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಆವೃತ್ತಿ ಜೂನ್‌ನಿಂದ ಆರಂಭವಾಗಲಿದೆ. ಈ ಬಾರಿ ನಾವು ಅರ್ಹತೆ ಪಡೆದಿಲ್ಲ. ಹೀಗಾಗಿ, ಇಂದಿನಿಂದಲೇ ಸರಿಯಾದ ಸಿದ್ಧತೆ ನಡೆಸಬೇಕು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ನಾವು ಅವರನ್ನು ಎದುರಿಸಬಹುದು" ಎಂದು ಹೇಳಿದರು.
ಇದನ್ನೂ ಓದಿ: 24 ವಿಕೆಟ್ ಪಡೆದು ಸಂಚಲನ ಸೃಷ್ಟಿಸಿದ ಟೀಂ ಇಂಡಿಯಾದ ಲೆಜಂಡರಿ ಕ್ರಿಕೆಟರ್ ಮಗ!
ರಣಜಿ ಕ್ರಿಕೆಟ್ ಆಡಲೇಬೇಕು: ಈ ನಿಟ್ಟಿನಲ್ಲಿ ಮುಂಬರುವ ರಣಜಿ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರು ಆಡಲೇಬೇಕು ಎಂದು ಒತ್ತಾಯಿಸಿರುವ ಗವಾಸ್ಕರ್, "ಜನವರಿ 23ರಿಂದ ರಣಜಿ ಟ್ರೋಫಿಯ ಮುಂದಿನ ಹಂತ ನಡೆಯುತ್ತದೆ. ಎಷ್ಟು ಮಂದಿ ಈ ತಂಡದಿಂದ ಆಡುತ್ತಾರೆ, ಎಷ್ಟು ಮಂದಿ ರಣಜಿಗೆ ಲಭ್ಯವಾಗುತ್ತಾರೆ ನೋಡೋಣ. ಈ ಪಂದ್ಯಗಳಲ್ಲಿ ಆಡದೇ ಇರುವವರ ವಿಚಾರವಾಗಿ ಯಾವುದೇ ಸಬೂಬು, ನೆಪ, ಸಮರ್ಥನೆಗೆ ಅವಕಾಶವೇ ಇರಕೂಡದು. ಒಂದು ವೇಳೆ ಆಡದೇ ಇದ್ದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು. ಆಟಗಾರರಲ್ಲಿ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ನಮಗೆ ನಿಮ್ಮಲ್ಲಿ ಬದ್ಧತೆ ಬೇಕು. ನೀವು ಸೂಕ್ತ ರೀತಿಯಲ್ಲಿ ಆಡುತ್ತಿಲ್ಲ. ನೀವು ಏನೆಲ್ಲಾ ಮಾಡಬೇಕೋ ಮಾಡಿ. ಇಲ್ಲದೇ ಹೋದರೆ ನಿಮಗೆ ಟೆಸ್ಟ್ ತಂಡದಲ್ಲಿ ಸ್ಥಾನವಿರದು" ಎಂದು ಚಾಟಿ ಬೀಸಿದರು.
Sunil Gavaskar on India's coaching staff. pic.twitter.com/8X2cFvQ3n7
— Mufaddal Vohra (@mufaddal_vohra) January 5, 2025
ದೃಢ ನಿರ್ಧಾರಕ್ಕೆ ಬದ್ಧತೆಯ ಕೊರತೆ: ಆಸ್ಟೇಲಿಯಾ ವಿರುದ್ಧ ಭಾರತದ ಬ್ಯಾಟಿಂಗ್ ಲೈನಪ್‌ನಿಂದ ಶತಕಗಳ ಕೊರತೆಯ ಕುರಿತು ಮಾತನಾಡಿದ ಗವಾಸ್ಕರ್, "ಯಶಸ್ವಿ ಜೈಸ್ವಾಲ್ ಮತ್ತು ನಿತಿಶ್ ಕುಮಾರ್ ರೆಡ್ಡಿ ಮಾತ್ರ ತಲಾ ಒಂದೊಂದು ಶತಕ ಬಾರಿಸಿದರು. ಇಲ್ಲಿ ತಂಡದ ಬದ್ಧತೆ, ಯೋಜನೆ, ಯೋಚನೆಗಳ ಅನ್ವಯಿಸುವಿಕೆ ಅತ್ಯಂತ ಕೆಳ ಮಟ್ಟದಲ್ಲಿರುವುದು ಕಾಣುತ್ತದೆ. ಎಷ್ಟು ಮಂದಿ ಭಾರತದ ಬ್ಯಾಟರ್‌ಗಳ ಶತಕ ಬಾರಿಸಿದರು?, ಮೊದಲ ಟೆಸ್ಟ್‌ನಲ್ಲಿ ಮೂಡಿಬಂದ ಎರಡು ಶತಕಗಳನ್ನು ಹೊರತುಪಡಿಸಿದರೆ ನಿತೀಶ್ ರೆಡ್ಡಿ ಮಾತ್ರ ಶತಕ ಬಾರಿಸಿದ್ದಾರೆ. ಎಷ್ಟು ಮಂದಿ ಆಟಗಾರರು ಅರ್ಧ ಶತಕ ಸಿಡಿಸಿದರು?, ಶತಕ ಸಿಡಿಸುವುದು ಸುಲಭವಲ್ಲ ಎಂದು ನೀವು ಹೇಳಬಹುದು. ಆದರೆ, ಎಷ್ಟು ಮಂದಿ ಆಟಗಾರರು ಕನಿಷ್ಠ ಅರ್ಧ ಶತಕ ಸಿಡಿಸಿ ಪಂದ್ಯ ಗತಿಯನ್ನು ಬದಲಿಸಲು ಪ್ರಯತ್ನಿಸಿದರು?, ಇದು ನಡೆಯಲೇ ಇಲ್ಲ, ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅನ್ವಯಿಸುವಿಕೆ ಬಹಳ ಮುಖ್ಯ. ಹಾಗಾಗಿ ಈ ಅನ್ವಯಿಸುವಿಕೆ ಮತ್ತು ಗಟ್ಟಿ ನಿರ್ಧಾರ ತೆಗೆದುಕೊಳ್ಳುವಲ್ಲಿನ ಬದ್ಧತೆಯ ಕೊರತೆ ಕಂಡುಬಂತು" ಎಂದರು.
ಇದನ್ನೂ ಓದಿ: ಎಲ್ಲರ ಮುಂದೆ ಭಾರತೀಯ ಕ್ರಿಕೆಟ್ ದಿಗ್ಗಜನಿಗೆ ಅವಮಾನಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಫ್ಯಾನ್ಸ್ ಗರಂ