ವಿಶಾಖಪಟ್ಟಣಂ: ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಶುಕ್ರವಾರ ಆರಂಭಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರದ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪರೋಕ್ಷವಾಗಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇದರ ಜೊತೆಗೆ ಬೃಹತ್ ಮೊತ್ತ ಕಟ್ಟಿರುವ ಭಾರತ ತಂಡಕ್ಕೆ ಅವರು ಅಭಿನಂದನೆ ಕೂಡ ಸಲ್ಲಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಕಣಕ್ಕಿಳಿದಿದೆ. ಪಂದ್ಯದಲ್ಲಿ ಟೀಂ ಇಂಡಿಯಾದ ಯಂಗ್ ಓಪನರ್ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ (179* ರನ್) ಸಿಡಿಸಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಅವರೊಂದಿಗೆ ಮೈದಾನಕ್ಕಿಳಿದ ನಾಯಕ ರೋಹಿತ್ ಶರ್ಮಾ (14) ಬೇಗನೇ ಔಟ್ ಆದರು. ರೋಹಿತ್ ಬಳಿಕ ಬಂದ ಡ್ಯಾಶಿಂಗ್ ಓಪನರ್ ಶುಭ್ಮನ್ ಗಿಲ್ ತಾಳ್ಮೆಯ ಆಟ ಆಡದೇ ಎಂದಿನಂತೆ ವೈಫಲ್ಯ ಕಂಡಿದ್ದಕ್ಕೆ ರವಿಶಾಸ್ತ್ರಿ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.
ಮೂರನೆ ಕ್ರಮಾಂಕದಲ್ಲಿ ಕಣಕ್ಕಿದ ಗಿಲ್, 5 ಬೌಂಡರಿಗಳ ಸಹಿತ ಕೇವಲ 34 ರನ್ ಗಳಿಸಲು ಮಾತ್ರ ಶಕ್ತರಾದರು. ನಿರೀಕ್ಷಿತ ಹಾಗೂ ಹೆಚ್ಚಿನ ಸ್ಕೋರ್ಗಳನ್ನು ಗಳಿಸುವಲ್ಲಿ ಎಡಗಿದ ಅವರ ಆಟದ ವೈಖರಿಗೆ ರವಿಶಾಸ್ತ್ರಿ ಕಾಮೆಂಟರಿ ವೇಳೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಅವರ ಹೆಸರನ್ನು ಪ್ರಸ್ತಾಪಿಸಿದರೇ ಎಚ್ಚರಿಕೆ ಸಹ ನೀಡಿದರು.
''ಇದೊಂದು ಹೊಸ ತಂಡ. ಯುವಕರನ್ನು ನಂಬಿಕೊಂಡು ಕಣಕ್ಕಿಳಿದಿರುವ ತಂಡ. ಈ ಯುವಕರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ಸಮಯ. ಸಿಕ್ಕ ಅವಕಾಶಗಳನ್ನು ಯಾರೂ ಬಿಟ್ಟು ಕೊಡಬಾರದು'' ಎಂದು ಆಡುವ 11ರ ಬಳಗದಲ್ಲಿ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವ ಯುವ ಆಟಗಾರರಿಗೆ ಸಮಯೋಚಿತ ಎಚ್ಚರಿಕೆಯನ್ನು ನೀಡಿದರು.