ಬೆಂಗಳೂರು:ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 10ನೇ ವರ್ಷದ ವಾರ್ಷಿಕೋತ್ಸವಕ್ಕೆ ಒಂದು ದಿನ ಬಾಕಿಯಿರುವಾಗಲೇ, 2024ರ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಾಂಕ ಪ್ರಕಟವಾಗಿದೆ.
11ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 15 ಮತ್ತು 16ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಆಯೋಜಕರು ಖಚಿತಪಡಿಸಿದ್ದಾರೆ. ಒಂದು ದಶಕದ ಹಿಂದೆ ಮುಂಬೈನಲ್ಲಿ, ಯು ಮುಂಬಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದೊಂದಿಗೆ ಪ್ರೋ ಕಬಡ್ಡಿ ಲೀಗ್‌ನ ಪ್ರಯಾಣ ಪ್ರಾರಂಭವಾಗಿತ್ತು.
2023ರ ಡಿಸೆಂಬರ್ 2ರಿಂದ 2024ರ ಮಾರ್ಚ್ 1ರವರೆಗೆ ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಈ ಮೂಲಕ 10 ಋುತುಗಳನ್ನು ಪೂರ್ಣಗೊಳಿಸಿದ ಭಾರತದ ಎರಡನೇ ಕ್ರೀಡಾ ಲೀಗ್ ಇದಾಗಿದೆ.
ಇದಲ್ಲದೇ, ಪ್ರೋ ಕಬಡ್ಡಿಯ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಸೀಸನ್ 11ಕ್ಕೂ ಮುಂಚಿತವಾಗಿ ಹೊಸ ಲೋಗೋವನ್ನು (ಲಾಂಛನ) ಅನಾವರಣಗೊಳಿಸಿದೆ. ನೂತನ ಲಾಂಛನವು ಭಾರತೀಯ ತ್ರಿವರ್ಣ ಧ್ವಜವನ್ನು ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಹೊಂದಿದ್ದು, ಕಬಡ್ಡಿಯನ್ನು ದೇಶದ ಹೆಮ್ಮೆಯ ಕ್ರೀಡೆ ಎಂದು ಚಿತ್ರಿಸುತ್ತಿದೆ.
ಈ ಕುರಿತು ಮಾತನಾಡಿರುವ ಪ್ರೊ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ, ''ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರೊ ಕಬಡ್ಡಿ ಸೀಸನ್ 11 ಆಟಗಾರರ ಹರಾಜು ನಡೆಯಲಿದೆ ಎಂದು ಘೋಷಿಸಲು ನಮಗೆ ಸಂತಸವಾಗುತ್ತಿದೆ. ಭಾರತದ ವಿಶಿಷ್ಟ ಮತ್ತು ಜನಪ್ರಿಯ ಕ್ರೀಡೆಯಾಗಿರುವ ಕಬಡ್ಡಿಯನ್ನು, ಪ್ರೊ ಕಬಡ್ಡಿ ಮೂಲಕ ವಿಶ್ವದರ್ಜೆಯಲ್ಲಿ ಪ್ರದರ್ಶಿಸಲಾಗಿದೆ. ಎಕೆಎಫ್‌ಐನ (ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ) ಉಸ್ತುವಾರಿಯಲ್ಲಿ ಪ್ರೊ ಕಬಡ್ಡಿಯ ಎಲ್ಲ ಪಾಲುದಾರರಿಗೆ ಮತ್ತು ದೇಶದ ಕಬಡ್ಡಿ ಪರಿಸರ ವ್ಯವಸ್ಥೆಗೆ ಇದು ದೊಡ್ಡ ಸಾಧನೆಯಾಗಿದೆ'' ಎಂದರು.
ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಆಟಗಾರರ ಹರಾಜು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ:ಒಲಿಂಪಿಕ್ಸ್ ಟೆನಿಸ್ ಸಿಂಗಲ್ಸ್ನಿಂದ ಹಿಂದೆ ಸರಿದ ಎರಡು ಬಾರಿಯ ಚಿನ್ನದ ಪದಕ ವಿಜೇತ ಮರ್ರೆ; ಕಾರಣ ಇದು! - Paris Olympics 2024