ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕ ವಿಜೇತರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿ ಅಭಿನಂದಿಸಿದರು. ಸ್ವಾತಂತ್ರೋತ್ಸವ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ನೆರವೇರಿಸಿದ ಬಳಿಕ ಎಲ್ಲಾ ಆಟಗಾರರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಮೋದಿ, ಸಂಭಾಷಣೆ ನಡೆಸಿದರು.
ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಮತ್ತು ಶ್ರೀಜೇಶ್ ಅವರೊಂದಿಗೆ ಪ್ರಧಾನಿ ಮೋದಿ ಫೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ತಂಡದ ಎಲ್ಲಾ ಆಟಗಾರರು ಸಹಿ ಮಾಡಿದ ಜರ್ಸಿ ಮತ್ತು ಹಾಕಿ ಸ್ಟಿಕ್ ಅನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.
ಒಲಿಂಪಿಕ್ಸ್ ಬಳಿಕ ತಂಡದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಹಾಕಿಗೆ ವಿದಾಯ ಹೇಳಿದ್ದು, ಅವರ ಮುಂದಿನ ಪಯಣಕ್ಕೆ ಪ್ರಧಾನಿ ಶುಭ ಹಾರೈಸಿದರು.
ಪಿಸ್ತೂಲ್ ಕುರಿತು ವಿವರಿಸಿದ ಮನು ಬಾಕರ್: ಇದಾದ ನಂತರ, ಭಾರತೀಯ ಸ್ಟಾರ್ ಶೂಟರ್ ಮನು ಭಾಕರ್ ತಾನು ಪದಕ ಗೆದ್ದ ಪಿಸ್ತೂಲ್ ಕುರಿತು ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದರು.
ಒಲಿಂಪಿಕ್ಸ್‌ನಲ್ಲಿ 6 ಪದಕ ಗೆದ್ದ ಭಾರತ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 6 ಪದಕ ಜಯಿಸಿದೆ. ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೊದಲ ಪದಕ ಗೆದ್ದಿದ್ದರು. ಇದರ ನಂತರ ಸರಬ್ಜೋತ್ ಸಿಂಗ್ ಅವರೊಂದಿಗೆ ಟೀಂ ಈವೆಂಟ್‌ನಲ್ಲಿ ಅವರು ಎರಡನೇ ಪದಕ ಜಯಿಸಿದ್ದರು. ಕುಸ್ತಿಯಲ್ಲಿ ಅಮನ್ ಸೆಹ್ರಾವತ್ ಕಂಚು ಗೆದ್ದರೆ, ಹಾಕಿ ತಂಡ 52 ವರ್ಷಗಳ ನಂತರ ಸತತ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ನೀರಜ್ ಚೋಪ್ರಾ ಜಾವೆಲಿನ್ನಲ್ಲಿ ಬೆಳ್ಳಿ, ಸ್ವಪ್ನಿಲ್ ಕುಸಾಲೆ 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದರು.
ಇದನ್ನೂ ಓದಿ:ಸ್ವಾತಂತ್ರ್ಯ ದಿನವೇ ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿದ್ದ ಬೆಸ್ಟ್ ಫ್ರೆಂಡ್ಸ್ ಧೋನಿ-ರೈನಾ! - Dhoni Raina