ಕಿಂಗ್‌ಸ್ಟೌನ್ (ವೆಸ್ಟ್ಇಂಡೀಸ್):ಆಸ್ಟ್ರೇಲಿಯಾಕ್ಕೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಯಶಸ್ವಿ ವೇಗಿ ಪ್ಯಾಟ್ ಕಮಿನ್ಸ್ ಟಿ20 ವಿಶ್ವಕಪ್‌ನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಮತ್ತು ಒಂದೇ ವಿಶ್ವಕಪ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಅಭಿದಾನಕ್ಕೆ ಪಾತ್ರರಾದರು.
ಅಫ್ಘಾನಿಸ್ತಾನ ವಿರುದ್ಧ ಜೂನ್ 23 ರಂದು ನಡೆದ ಸೂಪರ್-8 ಹಂತದ ಪಂದ್ಯದಲ್ಲಿ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದರು. ಇನಿಂಗ್ಸ್ನ 18ನೇ ಓವರ್‌ನ ಕೊನೆಯ ಎಸೆತದಲ್ಲಿ ರಶೀದ್ ಖಾನ್ ವಿಕೆಟ್ ಪಡೆದರೆ, ನಂತರದ 20ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕರೀಂ ಜನತ್ ಮತ್ತು ಗುಲ್ಬದಿನ್ ನೈಬ್ರನ್ನು ಔಟ್ ಮಾಡುವ ಮೂಲಕ ಈ ವಿಶ್ವದಾಖಲೆ ಸೃಷ್ಟಿಸಿದರು.
ಇದೇ ವಿಶ್ವಕಪ್ನ ಕಳೆದ ಪಂದ್ಯದಲ್ಲಿ ಕಮಿನ್ಸ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 31 ವರ್ಷದ ಹಿರಿಯ ವೇಗಿ, ಬಾಂಗ್ಲಾದೇಶದ ವಿರುದ್ಧ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ಸತತ ಮೂರು ಎಸೆತಗಳಲ್ಲಿ ವಿಕೆಟ್ ಕಿತ್ತಿದ್ದರು. ಅದರಲ್ಲೂ ಅವರು 18 ಮತ್ತು 20 ನೇ ಓವರ್ನಲ್ಲಿಯೇ ವಿಕೆಟ್ ಪಡೆದಿದ್ದು ವಿಶೇಷ. 18ನೇ ಓವರ್‌ನ 5 ಮತ್ತು 6ನೇ ಎಸೆತಗಳಲ್ಲಿ ಕ್ರಮವಾಗಿ ಮೊಹಮದುಲ್ಲಾ, ಮೆಹದಿ ಹಸನ್ರನ್ನು ಪೆವಿಲಿಯನ್ ಸೇರಿಸಿದ್ದರೆ, 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹಿದ್ ಹೃದೋಯ್ ವಿಕೆಟ್ ಉರುಳಿಸಿದ್ದರು.
ರೋಮಾಂಚಕ ಸಮಯ:ಇನ್ನು, ಪಂದ್ಯದ ಬಳಿಕ ಮಾತನಾಡಿದ ಕಮಿನ್ಸ್, ಆಸ್ಟ್ರೇಲಿಯಾ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ನಂತರ ಸತತ ಎರಡು ಪಂದ್ಯಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವುದು ರೋಮಾಂಚಕ ಅನುಭವವಾಗಿದೆ ಎಂದು ಹೇಳಿದರು.