ಕರ್ನಾಟಕ

karnataka

ETV Bharat / sports

ಪ್ಯಾರಿಸ್​ ಒಲಿಂಪಿಕ್ಸ್​ಗೆ ಭಾರತದ 28 ಸದಸ್ಯರ​ ತಂಡ ರೆಡಿ: 'ಗೋಲ್ಡನ್​​ ಬಾಯ್'​ ನೀರಜ್​ ಚೋಪ್ರಾ ಸಾರಥಿ - Paris Olympics 2024 - PARIS OLYMPICS 2024

ಪ್ಯಾರಿಸ್​ ಒಲಿಂಪಿಕ್ಸ್​ಗೆ ಸಿದ್ಧಗೊಂಡಿರುವ ಭಾರತ ತಂಡದಲ್ಲಿ 17 ಪುರುಷರು, 11 ಮಹಿಳಾ ಅಥ್ಲೀಟ್​ಗಳಿದ್ದಾರೆ. ಈ ಪೈಕಿ 8 ಮಂದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.

Neeraj Chopra and other Indian athletes
ನೀರಜ್​ ಚೋಪ್ರಾ ಹಾಗೂ ಇತರ ತಂಡದ ಅಥ್ಲೀಟ್​ಗಳು (ANI)

By ETV Bharat Karnataka Team

Published : Jul 5, 2024, 12:14 PM IST

ನವದೆಹಲಿ:ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್-2024​ನಲ್ಲಿ ಭಾರತದ 28 ಸದಸ್ಯರು ಸ್ಪರ್ಧಿಸಲಿದ್ದು, 'ಚಿನ್ನದ ಹುಡುಗ'​ ಪುರುಷರ ಜಾವೆಲಿನ್​ ಥ್ರೋ ಹಾಲಿ ಚಾಂಪಿಯನ್​ ನೀರಜ್​ ಚೋಪ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಥ್ಲೆಟಿಕ್ಸ್​ ಫೆಡರೇಶನ್​ ಆಫ್​ ಇಂಡಿಯಾ (AFI) ಗುರುವಾರ ಘೋಷಿಸಿದೆ.

ನೀರಜ್​ ಚೋಪ್ರಾ 2019ರಲ್ಲಿ ನಡೆದ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಪದಕ ಗೆದ್ದ ದೇಶದ ಮೊದಲ ಟ್ರ್ಯಾಕ್​ ಹಾಗೂ ಫೀಲ್ಡ್​ ಅಥ್ಲೀಟ್​ ಎಂಬ ಇತಿಹಾಸ ನಿರ್ಮಿಸಿದ್ದರು. 87.58 ಮೀಟರ್ ದೂರ ಜಾವೆಲಿನ್​ ಎಸೆದು ಇವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

2023ರ ಹ್ಯಾಂಗ್​ಝೌ ಏಷ್ಯನ್​ ಗೇಮ್ಸ್​ನಲ್ಲಿ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದ 26 ವಯಸ್ಸಿನ ಕಿಶೋರ್​ ಜೆನಾ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಪಾದಾರ್ಪಣೆ ಮಾಡುತ್ತಿದ್ದು, ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾಗೆ ಜೊತೆಯಾಗಲಿದ್ದಾರೆ. ಕಳೆದ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಅಣ್ಣು ರಾಣಿ ಮಹಿಳೆಯರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರಳುವ ತಂಡದಲ್ಲಿ 17 ಪುರುಷರು ಹಾಗೂ 11 ಮಹಿಳಾ ಅಥ್ಲೀಟ್​ಗಳಿದ್ದಾರೆ. ಈ 28 ಅಥ್ಲೀಟ್​ಗಳ ಪೈಕಿ 8 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು ಎಂಬುದು ಗಮನಾರ್ಹ.

ನೀರಜ್​ ಹಾಗೂ ಅಣ್ಣು ರಾಣಿ ಅವರಲ್ಲದೇ, ಪುರುಷರ 3,000 ಮೀಟರ್ ಸ್ಟೀಪಲ್‌ಚೇಸ್ ಅಥ್ಲೀಟ್ ಅವಿನಾಶ್ ಸೇಬಲ್, ಏಷ್ಯಾದ ಅಗ್ರ ಪುರುಷರ ಶಾಟ್‌ಪುಟ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ತಜಿಂದರ್‌ಪಾಲ್ ಸಿಂಗ್ ತೂರ್, ಮಹಿಳಾ ರೇಸ್​ ವಾಕರ್ ಪ್ರಿಯಾಂಕಾ ಗೋಸ್ವಾಮಿ ಮತ್ತು 4x400 ಮೀಟರ್ ರಿಲೇ ಓಟಗಾರರಾದ ಮುಹಮ್ಮದ್ ಅನಾಸ್, ಅಮೋಜ್ ಜೇಕಬ್‌ನ ಹಿಂದಿನ ಒಲಿಂಪಿಕ್ಸ್​ ಆವೃತ್ತಿಯಲ್ಲಿ ಸ್ಪರ್ಧಿಸಿದ್ದರು.

ಭಾರತದ ಪುರುಷರ 4x400 ಮೀ ರಿಲೇ ತಂಡದ ಭಾಗವಾಗಿರುವ ಮುಹಮ್ಮದ್ ಅನಾಸ್ ಬೇಸಿಗೆ ಕ್ರೀಡಾಕೂಟದಲ್ಲಿ ಮೂರನೇ ಬಾರಿಗೆ ನೇರ ಪ್ರದರ್ಶನ ನೀಡುತ್ತಿದ್ದಾರೆ. ಹರ್ಡಲರ್ ಜ್ಯೋತಿ ಯರ್ರಾಜಿ, ಶಾಟ್​ಪುಟ್​ ಆಟಗಾರ್ತಿ ಅಭಾ ಖತುವಾ ಮತ್ತು ಸ್ಟೀಪಲ್​ಚೇಸರ್​ ಪಾರುಲ್​ ಚೌಧರಿ ಅವರು ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 3,000 ಮೀಟರ್ ಸ್ಟೀಪಲ್ ಚೇಸ್ ಮತ್ತು 5,000 ಮೀಟರ್ ಓಟದಲ್ಲಿ ಸ್ಪರ್ಧಿಸಲಿರುವ ಪಾರುಲ್ ಚೌಧರಿ ಎರಡು ವೈಯಕ್ತಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಆಯ್ಕೆಯಾದ ಏಕೈಕ ಕ್ರೀಡಾಪಟು. ಕಳೆದ ವರ್ಷ ಇವರು ಏಷ್ಯನ್ ಗೇಮ್ಸ್‌ನಲ್ಲಿ 5,000 ಮೀಟರ್ ಓಟದಲ್ಲಿ ಚಿನ್ನದ ಪದಕ ಮತ್ತು 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಪುರುಷರ 20 ಕಿ.ಮೀ ವೇಗದ ನಡಿಗೆ ಸ್ಪರ್ಧೆಯಲ್ಲಿ ಅಕ್ಷದೀಪ್ ಸಿಂಗ್, ರಾಮ್ ಬಬೂ, ವಿಕಾಶ್ ಸಿಂಗ್ ಮತ್ತು ಪರಮ್‌ಜೀತ್ ಸಿಂಗ್ ಬಿಶ್ತ್ ಸ್ಪರ್ಧಿಸಲಿದ್ದಾರೆ. ಸೂರಜ್ ಪನ್ವಾರ್ ಮಿಶ್ರಾ ಅವರು ಮ್ಯಾರಥಾನ್ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರೊಂದಿಗೆ ಭಾಗವಹಿಸಲಿದ್ದಾರೆ.

ಸೂರಜ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಉತ್ತಮ ಸಾಧನೆಯೊಂದಿಗೆ ಸ್ಥಾನ ಪಡೆದರೆ, ಉಳಿದವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದರು. ಆದರೆ, ಪ್ರತೀ ಈವೆಂಟ್‌ನಲ್ಲಿ ಒಂದು ದೇಶದ ಗರಿಷ್ಠ 3 ಅಥ್ಲೀಟ್‌ಗಳು ಹಾಗು ಮಿಶ್ರ ಮ್ಯಾರಥಾನ್‌ ರೇಸ್‌ ವಾಕ್‌ನಲ್ಲಿ ಒಂದು ಲಿಂಗಕ್ಕೆ ಒಂದು ಸ್ಥಾನವೆಂಬ ನಿಯಮ ಇರುವುದರಿಂದ ರಾಮ್ ಬಬೂ ಅವಕಾಶ ಕಳೆದುಕೊಂಡಿದ್ದಾರೆ.

ಇನ್ನು, ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಪ್ರಿಯಾಂಕಾ ಗೋಸ್ವಾಮಿ ಅವರು 20 ಕಿ.ಮೀ ರೇಸ್ ವಾಕ್‌ನಲ್ಲಿ ಭಾರತ ತಂಡ ಪ್ರತಿನಿಧಿಸುತ್ತಿರುವ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ.

ಭಾರತೀಯ ಅಥ್ಲೆಟಿಕ್ಸ್ ತಂಡ ಹೀಗಿದೆ:

ಪುರುಷರು: ಅವಿನಾಶ್ ಸೇಬಲ್ (ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್), ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಎಸೆತ), ಕಿಶೋರ್ ಜೆನಾ (ಪುರುಷರ ಜಾವೆಲಿನ್ ಎಸೆತ), ತಜಿಂದರ್ ಪಾಲ್ ಸಿಂಗ್ ತೂರ್ (ಪುರುಷರ ಶಾಟ್ ಪುಟ್), ಪ್ರವೀಣ್ ಚಿತ್ರವೆಲ್ (ಪುರುಷರ ಟ್ರಿಪಲ್ ಜಂಪ್), ಅಬ್ದುಲ್ಲಾ ಅಬೂಬಕರ್ (ಪುರುಷರ ಟ್ರಿಪಲ್ ಜಂಪ್), ಸರ್ವೇಶ್ ಕುಶಾರೆ (ಪುರುಷರ ಎತ್ತರ ಜಿಗಿತ), ಅಕ್ಷದೀಪ್ ಸಿಂಗ್ (ಪುರುಷರ 20 ಕಿ.ಮೀ ಓಟದ ನಡಿಗೆ), ವಿಕಾಶ್ ಸಿಂಗ್ (ಪುರುಷರ 20 ಕಿ.ಮೀ ಓಟದ ನಡಿಗೆ), ಪರಮ್‌ಜೀತ್ ಸಿಂಗ್ ಬಿಶ್ತ್ (ಪುರುಷರ 20 ಕಿ.ಮೀ ಓಟದ ನಡಿಗೆ), ಮುಹಮ್ಮದ್ ಅನಾಸ್ (ಪುರುಷರ 4x400 ಮೀ ರಿಲೇ), ಮುಹಮ್ಮದ್ ಅಜ್ಮಲ್ (ಪುರುಷರ 4x400 ಮೀ ರಿಲೇ), ಅಮೋಜ್ ಜಾಕೊಬ್ (ಪುರುಷರ 4x400 ಮೀ ರಿಲೇ), ಸಂತೋಷ್ ಕುಮಾರ್ ತಮಿಳರಸನ್ (ಪುರುಷರ 4x400 ಮೀ ರಿಲೇ), ರಾಜೇಶ್ ರಮೇಶ್ (ಪುರುಷರ 4x400 ಮೀ ರಿಲೇ), ಮಿಜೋ ಚಾಕೊ ಕುರಿಯನ್ (ಪುರುಷರ 4x400 ಮೀ ರಿಲೇ), ಸೂರಜ್ ಪನ್ವಾರ್ (ರೇಸ್ ವಾಕ್ ಮಿಶ್ರ ಮ್ಯಾರಥಾನ್).

ಮಹಿಳಾ ಸ್ಪರ್ಧಿಗಳು:ಕಿರಣ್ ಪಹಲ್ (400 ಮೀ) , ಪಾರುಲ್ ಚೌಧರಿ (ಮಹಿಳೆಯರ 3,000 ಮೀ ಸ್ಟೀಪಲ್‌ಚೇಸ್ ಮತ್ತು 5,000 ಮೀ), ಜ್ಯೋತಿ ಯರ್ರಾಜಿ (ಮಹಿಳೆಯರ 100 ಮೀ ಹರ್ಡಲ್ಸ್), ಅಣ್ಣು ರಾಣಿ (ಮಹಿಳೆಯರ ಜಾವೆಲಿನ್ ಎಸೆತ), ಅಭಾ ಖಾತುವಾ (ಮಹಿಳೆಯರ ಶಾಟ್‌ಪುಟ್), ಜ್ಯೋತಿಕಾ ಶ್ರೀ ದಂಡಿ (ಮಹಿಳೆಯರ 4x400ಮೀ ರಿಲೇ), ಶುಭಾ ವೆಂಕಟೇಶನ್ (ಮಹಿಳೆಯರ 4x400ಮೀ ರಿಲೇ), ವಿತ್ಯಾ ರಾಮರಾಜ್ (ಮಹಿಳೆಯರ 4x400ಮೀ ರಿಲೇ), ಎಂಆರ್ ಪೂವಮ್ಮ (ಮಹಿಳೆಯರ 4x400ಮೀ ರಿಲೇ), ಪ್ರಾಚಿ (ಮಹಿಳೆಯರ 4x400 ಮೀ ರಿಲೇ), ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿ.ಮೀ ಓಟದ ನಡಿಗೆ ಮತ್ತು ಓಟದ ನಡಿಗೆ ಮಿಶ್ರ ಮ್ಯಾರಥಾನ್).

ಇದನ್ನೂ ಓದಿ:ಫ್ರಾನ್ಸ್​ನ ಮಾರ್ಸೆಲ್ಲೆ ತಲುಪಿದ ಪ್ಯಾರಿಸ್​ ಒಲಿಂಪಿಕ್ಸ್​ ಜ್ಯೋತಿ: ಲಕ್ಷಾಂತರ ಜನರ ಸಂಭ್ರಮ - Olympic Torch

ABOUT THE AUTHOR

...view details