ನವದೆಹಲಿ/ಫ್ರಾನ್ಸ್:ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಭಾರಿ ಬಿಗಿ ಭದ್ರತೆಯಲ್ಲಿ ನಡೆಯಲಿವೆ. ದೇಶದ ಗೌರವ ಮತ್ತು ಕ್ರೀಡಾಪಟುಗಳ ಭದ್ರತಾ ದೃಷ್ಟಿಯಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ಫ್ರಾನ್ಸ್ ದೇಶವು, ಭಾರತ ಸೇರಿದಂತೆ ಹಲವು ದೇಶಗಳ ಸಹಾಯ ಕೋರಿದೆ. ಇದಕ್ಕೆ ಭಾರತ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮೂರನೇ ಬಾರಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿರುವುದರಿಂದ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಫೆಬ್ರವರಿ 29, 2024 ರಲ್ಲಿ, ಫ್ರಾನ್ಸ್ ಮತ್ತು ಕತಾರ್ 2024ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಹಲವು ಒಪ್ಪಂದಗಳಿಗೆ ಸಹಿ ಕೂಡ ಹಾಕಿರುವುದನ್ನು ಇಲ್ಲಿ ಗಮನಿಸಬಹುದು.
2024 ಜು. 26ರಿಂದ ಈ ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಫ್ರಾನ್ಸ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಫ್ರಾನ್ಸ್ ದೇಶದ ಈ ಮನವಿ ಮೇರಿಗೆ ಭಾರತವು ಒಲಿಂಪಿಕ್ಸ್‌ನ ಭದ್ರತೆಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಆಯ್ದ ಶ್ವಾನದಳ ಕೆ9 ತಂಡಗಳನ್ನು (ಪೋಲೀಸ್ ಶ್ವಾನ ಘಟಕ) ಕಳುಹಿಸಿಕೊಟ್ಟಿದೆ. ತರಬೇತಿ ಪಡೆದ ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್ ವ್ಯಾಸ್ಟ್ ಮತ್ತು ಡೆನ್‌ಬಿ ಎಂಬ ಕ್ರಮವಾಗಿ 5 ಮತ್ತು 3 ವರ್ಷದ ನುರಿತ ಶ್ವಾನಗಳು ಭದ್ರತಾ ಸೇವೆಯ ನೇತೃತ್ವ ವಹಿಸಿವೆ.
ಕ್ರೀಡಾಕೂಟಕ್ಕೆ ಭದ್ರತೆಯ ವೆಚ್ಚ:9/11ರ ಅಮೆರಿಕ ದಾಳಿಯ ನಂತರ ಭದ್ರತಾ ವೆಚ್ಚಗಳು ದುಪ್ಪಟ್ಟುಗೊಂಡಿವೆ. 2000ರಲ್ಲಿ ಸಿಡ್ನಿಯಲ್ಲಿ ನಡೆದ ಕ್ರೀಡಾಕೂಟಕ್ಕೆ 250 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿತ್ತು. ಅದೇ 2004ರಲ್ಲಿ ಅಥೆನ್ಸ್ ಕ್ರೀಡಾಕೂಟಕ್ಕೆ ಭದ್ರತೆಯ ವೆಚ್ಚವು 1.5 ಬಿಲಿಯನ್ ಡಾಲರ್ಗೂ ಮೀರಿತ್ತು. ಹಾಗೆಯೇ, ಕ್ರೀಡಾಕೂಟಗಳ ವೆಚ್ಚಗಳು 1ರಿಂದ 2 ಬಿಲಿಯನ್ ಡಾಲರ್ವರೆಗೂ ವ್ಯಯಿಸಲಾಗುತ್ತಿದೆ. ಇದಕ್ಕೆ ನಿದರ್ಶನ ಎಂದರೆ 2022ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭ. ಈ ಸಮಯದಲ್ಲಿ ಇದರ ವೆಚ್ಚು ಇನ್ನೂ ಹೆಚ್ಚಾಗಿತ್ತು. ಆಗ ಟೋಕಿಯೊ ಕ್ರೀಡಾಕೂಟದಲ್ಲಿ ಕೋವಿಡ್ ತಡೆಗಟ್ಟುವಿಕೆಗಾಗಿ ಮಾತ್ರವೇ 2.8 ಬಿಲಿಯನ್ ಡಾಲರ್ ಖರ್ಚು ಮಾಡಿರುವ ಬಗ್ಗೆ ವರದಿಗಳು ಆಗಿದ್ದವು.
ಬೆಲ್ಜಿಯನ್ ಶೆಫರ್ಡ್ಗೆ ಆದ್ಯತೆ:ಒಲಿಂಪಿಕ್ಸ್ ಭದ್ರತೆಗಾಗಿ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಬೆಲ್ಜಿಯನ್ ಶೆಫರ್ಡ್ ಶ್ವಾನಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದಕ್ಕೆ ಬಲವಾದ ಕಾರಣವೂ ಇದೆ. ಚುರುಕು ಮತ್ತು ಚಾಣಾಕ್ಷತನದ ಶ್ವಾನಗಳು ಇವಾಗಿದ್ದರಿಂದ ಇವುಗಳಿಗೆ ವಿಶೇಷ ರೀತಿಯ ಆದ್ಯತೆ ನೀಡಲಾಗಿದೆ. 2011ರಲ್ಲಿ ದಾಳಿಕೋರ ಒಸಾಮಾ ಬಿನ್ ಲಾಡೆನ್ ಅಡಗುತಾಣವನ್ನು ಪತ್ತೆಹಚ್ಚುವಲ್ಲಿ ಅಮೆರಿಕ ವಿಶೇಷ ಪಡೆಗಳಿಗೆ ಸಹಾಯ ಮಾಡುವಲ್ಲಿ ಈ ಬೆಲ್ಜಿಯನ್ ಶೆಫರ್ಡ್ ತಳಿಗಳು ಪ್ರಮುಖ ಪಾತ್ರ ವಹಿಸಿದ್ದವು. ಭದ್ರತಾ ಪಡೆಗಳಲ್ಲಿ ಉನ್ನತ ತರಬೇತಿ ಪಡೆದ ಈ ಚುರುಕುತನದ ಶ್ವಾನಗಳು, ಅನುಮಾನಾಸ್ಪದ ವ್ಯಕ್ತಿಯಿಂದ ಹಿಡಿದು, ಸುಧಾರಿತ ಸ್ಫೋಟಕ ಸಾಧನಗಳ ವರೆಗೆ ನಿಖರವಾಗಿ ಪತ್ತೆಹಚ್ಚುತ್ತವೆ. ಬೊಗಳದೇ ವಿಷಯ ತಿಳಿಸುವ ಸೂಕ್ಷ್ಮತೆ ಕೂಡ ಈ ಶ್ವಾನಗಳಿಗೆ ಕರಗತವಾಗಿದೆ.
ಸ್ಕ್ವಾಡ್ K-9:ಫ್ರಾನ್ಸ್‌ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ವಿಶೇಷ ತರಬೇತಿ ಪಡೆದ 10 ಕೆ9 ಶ್ವಾನ ಪಡೆಯನ್ನು ಕ್ರೀಡಾಕೂಟಕ್ಕೆ ಈಗಾಗಲೇ ಕಳುಹಿಸಿಕೊಟ್ಟಿದೆ. ವಿವಿಧ ತಳಿಗಳ 10 ನಾಯಿಗಳನ್ನು ಒಳಗೊಂಡಿರುವ ಈ ಪಡೆ, ಫ್ರಾನ್ಸ್‌ನ ಭದ್ರತೆಯ ಹೊಣೆ ಹೊತ್ತಿದೆ. ಇವುಗಳಲ್ಲಿ 6 ಬೆಲ್ಜಿಯನ್, 3 ಜರ್ಮನ್ ಶೆಫರ್ಡ್ ತಳಿ ಮತ್ತು 1 ಲ್ಯಾಬ್ರಡಾರ್ ರಿಟ್ರೈವರ್ ತಳಿಯ ಶ್ವಾಗಳು ಸೇರಿವೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಾಲ್ (SSB), ಅಸ್ಸಾಂ ರೈಫಲ್ಸ್ ಸೇರಿದಂತೆ ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಂದ (CAPFs) K9 ತಂಡದ 10 ನಾಯಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಜೊತೆಗೆ 17 ಸಿಬ್ಬಂದಿ ನಿಯೋಜಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ನಿಯೋಜನೆ: ಈ ಮಹಾ ಕ್ರೀಡಾಕೂಟಕ್ಕಾಗಿ ಫ್ರಾನ್ಸ್ ದೇಶವು ಪ್ರತಿ ದಿನ ಸುಮಾರು 30,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಿದೆ. ಸೀನ್ ನದಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸುಮಾರು 45,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿವೆ. ಅಪಾರ ಪ್ರಮಾಣದ ನುರಿತ ಭದ್ರತಾ ಪಡೆ ಒಲಿಂಪಿಕ್ ಕ್ರೀಡಾಕೂಟದ ಉಸ್ತುವಾರಿ ವಹಿಸಿಕೊಳ್ಳಲಿದೆ. ನೂರಾರು ಡ್ರೋನ್‌ಗಳು ಭದ್ರತೆ ಒದಗಿಸಲಿವೆ.