ಪ್ಯಾರಿಸ್(ಫ್ರಾನ್ಸ್):ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಂದು ಹೊಸ ಇತಿಹಾಸ ಸೃಷ್ಟಿಸಿತು. ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ, ಕಂಚಿನ ಪದಕ ಸಾಧನೆ ಮಾಡಿತು. ಇದರೊಂದಿಗೆ ಪ್ರಸ್ತುತ ಒಲಿಂಪಿಕ್ಸ್‌ನಲ್ಲಿ ಭಾರತ ನಾಲ್ಕು ಪದಕ ಗೆದ್ದುಕೊಂಡಂತಾಯಿತು.
ಭಾರತೀಯ ಹಾಕಿ ತಂಡ 52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕಗಳನ್ನು ಗೆದ್ದುಕೊಂಡಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಕಂಚು ಜಯಿಸಿತ್ತು.
ಇಂದಿನ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿದರೂ ಭಾರತ ಎರಡು ಬಾರಿ ಗುರಿ ತಪ್ಪಿಸಿಕೊಂಡಿತು. ಈ ನಡುವೆ ಸಂಜಯ್ ಅವರ ತಲೆಗೆ ಚೆಂಡು ಬಡಿದು ಅವರು ಆಟದಿಂದ ಹೊರಗುಳಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರೂ ಮೊದಲ ಕ್ವಾರ್ಟರ್ ಮುಕ್ತಾಯದ ವೇಳೆ 0-0 ಅಂತರದಿಂದ ಪಂದ್ಯ ಕೊನೆಗೊಂಡಿತು.
ಎರಡನೇ ಕ್ವಾರ್ಟರ್‌ನ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಸ್ಪೇನ್ 18ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಇದಾದ ಬಳಿಕ ದ್ವಿತೀಯಾರ್ಧ ಪೂರ್ಣಗೊಳ್ಳುವ 20 ಸೆಕೆಂಡು ಮೊದಲು ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಕೊನೆಯ 10 ಸೆಕೆಂಡುಗಳಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಗೋಲು ಗಳಿಸಿ ಪುನರಾಗಮನ ಮಾಡಿದರು. ದ್ವಿತೀಯಾರ್ಧದ ಅಂತ್ಯಕ್ಕೆ ಉಭಯ ತಂಡಗಳ ಸ್ಕೋರ್ 1-1ಕ್ಕೆ ಸಮವಾಗಿತ್ತು.
ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿ ಆರಂಭ ಮಾಡಿತು. ಪಂದ್ಯದ 33ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಮತ್ತೊಂದು ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಭಾರತ 2-1 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ವರೆಗೂ ಸ್ಪೇನ್ ವಿರುದ್ಧ ಮುನ್ನಡೆ ಕಾಯ್ದುಕೊಂಡಿತು. ನಾಲ್ಕನೇ ಕ್ವಾರ್ಟರ್ನಲ್ಲೂ ಇದೇ ಆಟ ಮುಂದುವರೆಸಿದ ಭಾರತ ಎದುರಾಳಿಗೆ ಗೋಲು ದಾಖಲಿಸಲು ಯಾವುದೇ ಅವಕಾಶ ಮಾಡಿಕೊಡದೇ ಅಂತಿಮವಾಗಿ ಪಂದ್ಯ ಗೆದ್ದುಕೊಂಡಿತು.
ಪ್ರಧಾನಿ ಮೋದಿ ಅಭಿನಂದನೆ:ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದೆ. ಇದು ಒಲಿಂಪಿಕ್ಸ್‌ನಲ್ಲಿ ತಂಡ ಜಯಿಸಿದ ಸತತ ಎರಡನೇ ಪದಕವಾಗಿರುವುದು ಇನ್ನಷ್ಟು ವಿಶೇಷ" ಎಂದು ಆಟಗಾರರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಒಲಿಂಪಿಕ್ಸ್ ಕುಸ್ತಿ: ಸೆಮಿಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್; ಚಿಗುರೊಡೆದ ಪದಕ ನಿರೀಕ್ಷೆ - Aman Sehrawat