ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆಲ್ಲುವ ಮೂಲಕ ಮನು ಭಾಕರ್ ಇದುವರೆಗೆ ಭಾರತದ ಶ್ರೇಷ್ಠ ತಾರೆಯಾಗಿ ಹೊರಹೊಮ್ಮಿದ್ದಾರೆ. ಕ್ರೀಡಾಕೂಟದ 5ನೇ ದಿನವಾದ ಇಂದು ಭಾರತಕ್ಕೆ ಯಾವುದೇ ಪದಕದ ಪಂದ್ಯವಿಲ್ಲ. ಆದರೆ, ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಮತ್ತು ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪಂದ್ಯ ಆಡಲಿದ್ದಾರೆ. ಅಲ್ಲದೇ, ಲಕ್ಷ್ಯ ಸೇನ್ ಅವರಿಗೆ ಇಂದು ಮಹತ್ವದ ಪಂದ್ಯವಾಗಿದ್ದು, ಇಲ್ಲಿ ಗೆದ್ದವರು ನಾಕೌಟ್‌ಗೆ ಮುನ್ನಡೆಯಲಿದ್ದಾರೆ.
ಶೂಟಿಂಗ್: ಐಶ್ವರ್ಯ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ 3 ಪೊಸಿಷನ್ಸ್ ಪುರುಷರ ಅರ್ಹತೆಯಲ್ಲಿ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಐಶ್ವರ್ಯ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. ಸ್ವಪ್ನಿಲ್ ಅವರಿಗೆ ಇದು ಮೊದಲ ಒಲಿಂಪಿಕ್ಸ್ ಆಗಿದೆ.
50 ಮೀ ರೈಫಲ್ ಪುರುಷರ ಅರ್ಹತೆ ಪಂದ್ಯ - ಐಶ್ವರ್ಯ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ- ಮಧ್ಯಾಹ್ನ 12:30ಕ್ಕೆ
ಬ್ಯಾಡ್ಮಿಂಟನ್: ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸತತ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ. ಇಂದು ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ, ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ನಾಕೌಟ್ ಪಂದ್ಯವಾಡಲಿದ್ದಾರೆ. ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರೊಂದಿಗೆ ಹಣಾಹಣಿ ನಡೆಸಲಿದ್ದಾರೆ. ಇದೇ ವೇಳೆ, ಗುಂಪು ಹಂತದ ಪಂದ್ಯದಲ್ಲಿ ಹೆಚ್.ಎಸ್.ಪ್ರಣಯ್ ವಿಯೆಟ್ನಾಂನ ಡ್ಯೂಕ್ ಫಟ್ ಲೆ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಗುಂಪು ಹಂತ - ಪಿ.ವಿ.ಸಿಂಧು - ಮಧ್ಯಾಹ್ನ 12:50ಕ್ಕೆ
ಪುರುಷರ ಸಿಂಗಲ್ಸ್ ಗುಂಪು ಹಂತ - ಲಕ್ಷ್ಯ ಸೇನ್ - ಮಧ್ಯಾಹ್ನ 1:40ಕ್ಕೆ
ಪುರುಷರ ಸಿಂಗಲ್ಸ್ ಗುಂಪು ಹಂತ - ಹೆಚ್.ಎಸ್.ಪ್ರಣಯ್ - ರಾತ್ರಿ 11:00ಕ್ಕೆ
ಟೇಬಲ್ ಟೆನ್ನಿಸ್: ಭಾರತೀಯ ಟೇಬಲ್ ಟೆನ್ನಿಸ್‌ನಲ್ಲಿ ಮಿಂಚುತ್ತಿರುವ ಶ್ರೀಜಾ ಅಕುಲಾ ಇಂದು ಸಿಂಗಾಪುರದ ಜೆಂಗ್ ಜಿಯಾನ್ ಅವರನ್ನು ಎದುರಿಸಲಿದ್ದಾರೆ. ಇತ್ತೀಚೆಗಷ್ಟೇ ದೇಶದ ಆಟಗಾರ್ತಿ ಮನಿಕಾ ಬಾತ್ರಾ ಅವರನ್ನು ಸೋಲಿಸುವ ಮೂಲಕ ಅಕುಲಾ ಭಾರತದ ನಂಬರ್ 1 ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಇಂದು ಗೆಲ್ಲಲೇಬೇಕಿದೆ.
ಮಹಿಳೆಯರ ಸಿಂಗಲ್ಸ್ ರೌಂಡ್ - ಶ್ರೀಜಾ ಅಕುಲಾ - ಮಧ್ಯಾಹ್ನ 1:30ಕ್ಕೆ
ಬಾಕ್ಸಿಂಗ್: ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಭಾರತ ಪರ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತೋರಿದ ತಮ್ಮ ಸಾಧನೆಯನ್ನು ಮುಂದುವರೆಸುವ ತವಕದಲ್ಲಿದ್ದಾರೆ. ಇಂದು ನಾರ್ವೆಯ ಸುನ್ನಿವಾ ಹಾಫ್‌ಸ್ಟಾಡ್ ಅವರನ್ನು ಲೊವ್ಲಿನಾ ಎದುರಿಸಲಿದ್ದಾರೆ. ಅದೇ ಸಮಯದಲ್ಲಿ ಭಾರತದ ಬಾಕ್ಸರ್ ನಿಶಾಂತ್ ದೇವ್ ಈಕ್ವೆಡಾರ್‌ನ ಜೋಸ್ ರೋಡ್ರಿಗಸ್ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ 75 ಕೆಜಿ ರೌಂಡ್ ಆಫ್ 16 - ಲೋವ್ಲಿನಾ ಬೊರ್ಗೊಹೈನ್ - ಮಧ್ಯಾಹ್ನ 3:50ಕ್ಕೆ
ಪುರುಷರ 71 ಕೆಜಿ ರೌಂಡ್ ಆಫ್ 16 - ನಿಶಾಂತ್ ದೇವ್ - ಮಧ್ಯಾಹ್ನ 12:18ಕ್ಕೆ
ಬಿಲ್ಲುಗಾರಿಕೆ: ಭಾರತದ ಅತ್ಯುತ್ತಮ ಬಿಲ್ಲುಗಾರರಲ್ಲಿ ಒಬ್ಬರಾದ ದೀಪಿಕಾ ಕುಮಾರಿ ಅವರು ಎಸ್ಟೋನಿಯಾದ ರೀನಾ ಪರ್ನಾಟ್ ವಿರುದ್ಧ ವೈಯಕ್ತಿಕ ಸ್ಪರ್ಧೆಯಲ್ಲಿ ತಮ್ಮ ಒಲಿಂಪಿಕ್ಸ್ ಅಭಿಯಾನ ಪ್ರಾರಂಭಿಸಲಿದ್ದಾರೆ. ಇದೇ ವೇಳೆ, ಗ್ರೇಟ್ ಬ್ರಿಟನ್‌ನ ಟಾಮ್ ಹಾಲ್ ಅವರೊಂದಿಗೆ ತರುಣ್‌ದೀಪ್ ರೈ ಪೈಪೋಟಿ ನಡೆಸಲಿದ್ದಾರೆ.
ಮಹಿಳೆಯರ ವೈಯಕ್ತಿಕ ಸುತ್ತಿನ ಅರ್ಹತೆ ಪಂದ್ಯ - ದೀಪಿಕಾ ಕುಮಾರಿ - ಮಧ್ಯಾಹ್ನ 3:56ಕ್ಕೆ
ಪುರುಷರ ವೈಯಕ್ತಿಕ ಸುತ್ತಿನ ಅರ್ಹತೆ ಪಂದ್ಯ - ತರುಣ್ ದೀಪ್ ರೈ - ಮಧ್ಯಾಹ್ನ 9:28ಕ್ಕೆ
ಪದಕ ಪಟ್ಟಿ:ಇದುವರೆಗೆ ನಡೆದ ಸ್ಪರ್ಧೆಗಳಲ್ಲಿ ಜಪಾನ್ 7 ಚಿನ್ನದ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಭಾರತ ಎರಡು ಕಂಚಿನ ಪದಕಗಳೊಂದಿಗೆ 33ನೇ ಸ್ಥಾನದಲ್ಲಿದೆ. ಪ್ರಮುಖ ಐದು ರಾಷ್ಟ್ರಗಳ ಪದಕ ಮಾಹಿತಿ ಇಲ್ಲಿದೆ.