England Vs Pakistan 1st Test:ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ರನ್ ಮಳೆ ಹರಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ತ್ರಿಶತಕ ಸಿಡಿಸಿದರೆ, ಜೋ ರೂಟ್ ದ್ವಿಶತಕದಾಟವಾಡಿದರು. ಇದರೊಂದಿಗೆ ಇಂಗ್ಲೆಂಡ್ 823 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಪಾಕ್ ಬೌಲರ್ಗಳನ್ನು ಚೆಂಡಾಡಿದ ಹ್ಯಾರಿ ಬ್ರೂಕ್ 322 ಎಸೆತಗಳಲ್ಲಿ 29 ಬೌಂಡರಿ ಮತ್ತು ಮೂರು ಸಿಕ್ಸರ್ ಸಹಾಯದಿಂದ 317 ರನ್ ಕಲೆಹಾಕಿದರು. ಜೋ ರೂಟ್ 375 ಎಸೆತಗಳಲ್ಲಿ 262 ರನ್ ಪೇರಿಸಿದರು. ಇದರಲ್ಲಿ 17 ಬೌಂಡರಿಗಳು ಸೇರಿದ್ದವು.
ದಾಖಲೆ ಬುಕ್ ಸೇರಿದ ಬ್ರೂಕ್:ಬ್ರೂಕ್ 310 ಎಸೆತಗಳಲ್ಲಿ ತ್ರಿಶತಕ ಪೂರೈಸಿದರು. ಇದರೊಂದಿಗೆ ಟೆಸ್ಟ್ನಲ್ಲಿ ವೇಗವಾಗಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಅತಿ ವೇಗದ ತ್ರಿಶತಕದ ದಾಖಲೆ ಟೀಂ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ಸೆಹ್ವಾಗ್ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 278 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದರು.
ಬ್ರೂಕ್ ಇಂಗ್ಲೆಂಡ್ ಪರ ತ್ರಿಶತಕ ಸಿಡಿಸಿದ ಆರನೇ ಆಟಗಾರ ಎನಿಸಿಕೊಂಡರು. ಇವರಿಗಿಂತ ಮೊದಲು ಲಿಯೊನಾರ್ಡ್ ಹಟ್ಟನ್ (364), ವಾಲಿ ಹ್ಯಾಮಂಡ್ (336*), ಗ್ರಹಾಂ ಗೂಚ್ (333), ಆಂಡಿ ಸಂಧಮ್ (325) ಮತ್ತು ಜಾನ್ ಎಡ್ರಿಚ್ (310*) ಈ ಸಾಧನೆ ಮಾಡಿದ್ದರು.