ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯಾವುದೇ ಪಂದ್ಯಗಳು ನಡೆದರೂ ಉಭಯ ದೇಶಗಳ ಕ್ರೀಡಾಭಿಮಾನಿಗಳು ಕುತೂಹಲದಿಂದ ನೋಡುತ್ತಾರೆ. ಕ್ರಿಕೆಟ್ ಆಗಿರಲಿ, ಹಾಕಿ ಇರಲಿ ಅಥವಾ ಯಾವುದೇ ಪಂದ್ಯಗಳಿರಲಿ ಭಾರತ-ಪಾಕ್ ಮುಖಾಮುಖಿಯಾಗುತ್ತದೆ ಅಂದರೆ ಸಾಕು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಆದ್ರೆ ಈ ಬಾರಿ ಉಭಯ ದೇಶಗಳ ಕ್ರೀಡಾಭಿಮಾನಿಗಳಿಗೆ ಭಾರೀ ನಿರಾಶೆಯಾಗಿದೆ. ಉಭಯ ತಂಡಗಳ ನುಡವಿನ ಪಂದ್ಯವೊಂದು ರದ್ದಾಗಿದೆ. ಯಾವುದು ಆ ಪಂದ್ಯ ಮತ್ತು ರದ್ಧತಿಗೆ ಕಾರಣ ಏನು ಎಂದು ಇದೀಗ ತಿಳಿಯಿರಿ.
ಜನವರಿ 13 ರಿಂದ ಭಾರತದಲ್ಲಿ ಚೊಚ್ಚಲ ಬಾರಿಗೆ ಖೋಖೋ ವಿಶ್ವಕಪ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ಏರ್ಪಡಿಸಲಾಗಿತ್ತು. ಆದರೆ ಪಾಕಿಸ್ತಾನ ತಂಡ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಖೋಖೋ ಫೆಡರೇಷನ್ ಆಫ್ ಇಂಡಿಯಾ (ಕೆಕೆಎಫ್‌ಐ) ಪ್ರಕಟಣೆ ಹೊರಡಿಸಿದೆ.
ಕೆಕೆಎಫ್‌ಐ ನೀಡಿದ ಮಾಹಿತಿ ಪ್ರಕಾರ, ಖೋಖೋ ವಿಶ್ವಕಪ್ 2025ರ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನ ಭಾಗವಹಿಸುವುದಿಲ್ಲ ಎಂದು ಘೋಷಿಸಿತು. ವೇಳಾಪಟ್ಟಿಯ ಪ್ರಕಾರ ಜನವರಿ 13 ರಂದು ಭಾರತ-ಪಾಕಿಸ್ತಾನ ಮಧ್ಯೆ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕ್ ತಂಡಕ್ಕೆ ವೀಸಾ ವಿಳಂಬವಾಗಿದ್ದರಿಂದ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಭಾರತವು ಮೊದಲ ಪಂದ್ಯದಲ್ಲಿ ಪಾಕ್ ಬದಲಿಗೆ ನೇಪಾಳವನ್ನು ಎದುರಿಸಲಿದೆ ಎಂದು ಖೋಖೋ ಫೆಡರೇಷನ್ ಆಫ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ. ಪಾಕ್ ಭಾಗಿಯಾಗಲು ಸಾಧ್ಯವಾಗದ ಕಾರಣು ಖೋಖೋ ವಿಶ್ವಕಪ್‌ನಲ್ಲಿ 40 ತಂಡಗಳ ಬದಲಿಗೆ 39 ತಂಡಗಳು ಭಾಗವಹಿಲಿವೆ.