ಮೀರತ್(ಉತ್ತರ ಪ್ರದೇಶ): ಪತಿ, ಪತ್ನಿ ಮತ್ತು ಮೂವರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್ನ ಲಿಸಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂಪತಿಯ ಶವಗಳು ನೆಲದ ಮೇಲೆ ಬಿದ್ದಿದ್ದು, ಮೂವರು ಬಾಲಕಿಯರ ಶವಗಳನ್ನು ಬೆಡ್ ಬಾಕ್ಸ್ನೊಳಗೆ ತುರುಕಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೀರತ್ನ ಎಸ್ಎಸ್ಪಿ ವಿಪಿನ್ ಟಾಡಾ ಪ್ರತಿಕ್ರಿಯಿಸಿ, "ಗುರುವಾರ ರಾತ್ರಿ ಈ ಕುರಿತು ನಮಗೆ ದೂರು ಬಂತು. ನಾವು ಘಟನಾ ಸ್ಥಳಕ್ಕೆ ತೆರಳಿದಾಗ ಮನೆಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಮೇಲ್ಚಾವಣಿಯಿಂದ ಒಳಹೋಗಿ ನೋಡಿದಾಗ ಮೊಯಿನ್ ಮತ್ತು ಆತನ ಪತ್ನಿ ಅಸ್ಮಾ ಅವರ ಮೃತದೇಹಗಳು ನೆಲದ ಮೇಲೆ ಬಿದ್ದಿದ್ದವು. 8 ವರ್ಷದ ಅಫ್ಸಾ, 4 ವರ್ಷದ ಅಜೀಜಾ ಮತ್ತು 1 ವರ್ಷದ ಅಡಿಬಾ ಮೃತ ದೇಹಗಳು ಮಂಚದೊಳಗಿದ್ದ ಬಾಕ್ಸ್ನಲ್ಲಿ ಪತ್ತೆಯಾಯಿತು. ಕುಟುಂಬಕ್ಕೆ ಸಂಬಂಧಿಸಿದ ಯಾವುದೋ ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಯಾವುದಾದರೂ ದ್ವೇಷದ ಉದ್ದೇಶದಿಂದ ಈ ಕೊಲೆ ನಡೆದಿರುವ ಸಾಧ್ಯತೆ ಇದೆ. ತನಿಖೆ ನಡೆಯುತ್ತಿದೆ" ಎಂದು ಹೇಳಿದರು.
ಈ ಕುರಿತು ಮತ್ತಷ್ಟು ವಿವರ ನೀಡಿದ ಪೊಲೀಸ್ ಅಧಿಕಾರಿ, "ಸಾವನ್ನಪ್ಪಿದವರ ಕಾಲುಗಳನ್ನು ಬೆಡ್ಶೀಟ್ನಿಂದ ಕಟ್ಟಿ ಹಾಕಲಾಗಿತ್ತು. ಮಕ್ಕಳನ್ನು ಬೆಡ್ ಬಾಕ್ಸ್ನಲ್ಲಿ ತುರುಕಿದ್ದಾರೆ. ಘಟನಾ ಸ್ಥಳದಲ್ಲಿ ವಿಧಿ ವಿಜ್ಞಾನ ತಂಡ ಪರಿಶೀಲನೆ ನಡೆಸಿದೆ. ಹಿರಿಯ ಅಧಿಕಾರಿಗಳೂ ಕೂಡ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಸಾವನ್ನಪ್ಪಿದ ಪುರುಷ ವ್ಯಕ್ತಿ ಮೆಕಾನಿಕ್ ಆಗಿದ್ದರು. ದಂಪತಿ ಫೋನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಗಾಬರಿಗೊಂಡ ಮೊಯಿನ್ ಕುಟುಂಬಸ್ಥರು ಪರಿಶೀಲನೆ ನಡೆಸಿದ್ದು, ಮನೆಗೆ ಬೀಗ ಹಾಕಿರುವುದು ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. (ಐಎಎನ್ಎಸ್)