ಡಬ್ಲಿನ್ (ಐರ್ಲೆಂಡ್):ಪಾಕಿಸ್ತಾನ ತಂಡಕ್ಕೆ ನಾಯಕನಾಗಿ ಮರು ನೇಮಕವಾಗಿರುವ ಬಾಬರ್ ಅಜಂ ಟಿ20 ಕ್ರಿಕೆಟ್ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಅರ್ಧಶತಕ ಬಾರಿಸುವ ಮೂಲಕ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಐರಿಷ್ ಎದುರಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋಲುವ ಮೂಲಕ ಭಾರೀ ಅವಮಾನಕ್ಕೆ ಒಳಗಾಗಿದ್ದ ಪಾಕಿಸ್ತಾನ ಬಳಿಕದ ಎರಡು ಪಂದ್ಯಗಳನ್ನು ಗೆದ್ದು, ಸರಣಿ ಕೈವಶ ಮಾಡಿಕೊಂಡಿದೆ. ಇದರ ನಡುವೆ ತಂಡದ ನಾಯಕ ಬಾಬರ್ ಅಜಂ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ದಾಟಿದ್ದಾರೆ.
ಬಾಬರ್ ಅಜಂ, ಐರ್ಲೆಂಡ್ ವಿರುದ್ಧದ ಮೂರನೇ ಟಿ -20 ಪಂದ್ಯದಲ್ಲಿ 42 ಎಸೆತಗಳಲ್ಲಿ 75 ರನ್ ಬಾರಿಸಿದರು. ಇದು ಅವರ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ದಾಖಲಾದ 39 ಅರ್ಧಶತಕವಾಗಿದೆ. ಉತ್ತಮ ಲಯದಲ್ಲಿರುವ ಆಟಗಾರ ಈ ಮಾದರಿಯಲ್ಲಿ 50 + ರನ್ ಬಾರಿಸಿದ ಪಟ್ಟಿಯಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಈವರೆಗೂ ವಿರಾಟ್ ಕೊಹ್ಲಿ 38 ಬಾರಿ 50+ ರನ್ ಬಾರಿಸಿದ ಏಕೈಕ ಆಟಗಾರರಾಗಿದ್ದರು. ಇದನ್ನು ಬಾಬರ್ ಅಜಂ ದಾಟಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು 34 ಬಾರಿ ಈ ಸಾಧನೆ ಮಾಡಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಇತರ ದಾಖಲೆಗಳು:ಇನ್ನು ವೈಯಕ್ತಿಕ ದಾಖಲೆಗಳ ಪೈಕಿ, ಬಾಬರ್ ಐರ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ 25 ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟರ್ ಎನಿಸಿಕೊಂಡರು. ಐರಿಷ್ನ ಬೆಂಜಮಿನ್ ವೈಟ್ ಅವರ ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿದರು. ಜೊತೆಗೆ ಒಂದು ಒಂಟಿ ರನ್ ಓಡಿ ಒಟ್ಟು 25 ರನ್ ಗಳಿಸಿದರು.
ಬಾಬರ್ ಎರಡನೇ ವಿಕೆಟ್‌ಗೆ ಮೊಹಮ್ಮದ್ ರಿಜ್ವಾನ್ (56) ಜೊತೆಗೂಡಿ 139 ರನ್‌ಗಳ ಜೊತೆಯಾಟವನ್ನು ನೀಡಿದರು. ಇದು ಇಬ್ಬರ ನಡುವಿನ 10 ನೇ ಶತಕದ ಜೊತೆಯಾಟವಾಗಿದೆ. ಈ ಸಾಧನೆ ಮಾಡಿದ ಮೊದಲ ಜೋಡಿಯೂ ಆಗಿದೆ. ಇಬ್ಬರೂ ಸೇರಿ ಟಿ20 ಕ್ರಿಕೆಟ್ನಲ್ಲಿ 3 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.
ಐರ್ಲೆಂಡ್‌ನ ಅನುಭವಿ ಜೋಡಿಯಾದ ಪೌಲ್ ಸ್ಟಿರ್ಲಿಂಗ್ ಮತ್ತು ಆಂಡ್ರ್ಯೂ ಬಬ್ಬರ್ನಿ 2,043 ರನ್ ಜೊತೆಯಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಐದು ಬಾರಿ ಶತಕದ ಜೊತೆಯಾಟ ನೀಡಿದ್ದಾರೆ.
ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು 2-1 ರಲ್ಲಿ ಗೆಲ್ಲುವ ಮೂಲಕ ಟಿ20 ವಿಶ್ವಕಪ್ಗೆ ಉತ್ಸಾಹ ಹೆಚ್ಚಿಸಿಕೊಂಡಿದ್ದಾರೆ. ಬಳಿಕ ತಂಡವು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಟಿ 20 ಸರಣಿ ಆಡಲಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯು ಮೇ 22 ರಂದು ಹೆಡಿಂಗ್ಲಿ ಕಾರ್ನೆಗಿಯಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ:IPL: ಲಕ್ನೋ ವಿರುದ್ದ ಗೆದ್ದ ಡೆಲ್ಲಿ; ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸನಿಹ! - DC Beat LSG