ಪ್ಯಾರಿಸ್(ಫ್ರಾನ್ಸ್):ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಕೊನೆಗೊಂಡಿದೆ. ಇಂದು ನಡೆದ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಜೋಡಿ ಮಲೇಷ್ಯಾದ ವಿರುದ್ಧ ಸೋಲನುಭವಿಸಿದರು. ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವುಯಿ ಯಿಕ್ ಜೋಡಿ 21-13, 14-21, 21-16 ಸೆಟ್ಗಳಿಂದ ಪಂದ್ಯ ಗೆದ್ದು, ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ಪಂದ್ಯ ಹೀಗಿತ್ತು: ಮೊದಲ ಸುತ್ತಿನಲ್ಲಿ ಸಾತ್ವಿಕ್-ಚಿರಾಗ್ ಹಲವು ಅದ್ಭುತ ಸ್ಮ್ಯಾಷ್‌ಗಳೊಂದಿಗೆ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಮಧ್ಯ ವಿರಾಮದವರೆಗೂ ಈ ಜೋಡಿ 11-10 ಸೆಟ್ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು. ವಿರಾಮದ ಬಳಿಕವೂ ಮಿಂಚಿ, ಎದುರಾಳಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡದೇ 21-13 ಸೆಟ್ಗಳ ಅಂತರದಿಂದ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ 1-0 ಅಂತರದಿಂದ ಮುನ್ನಡೆ ಪಡೆದರು.
2ನೇ ಸೆಟ್‌ನಲ್ಲಿ ಮಲೇಷ್ಯಾ ಕಮ್‌ಬ್ಯಾಕ್:ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡ ಭಾರತ ಎರಡನೇ ಸೆಟ್‌ನಲ್ಲಿ ಕಠಿಣ ಪೈಪೋಟಿ ಎದುರಿಸಿತು. ಟೋಕಿಯೊ 2020ರ ಕಂಚಿನ ಪದಕ ವಿಜೇತ ಮಲೇಷ್ಯಾದ ಚಿಯಾ-ಸೋಹ್ ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರು. ಮಲೇಷ್ಯಾ ಜೋಡಿ ಮೊದಲ ಹಂತದಲ್ಲೇ 5-4 ಅಂತರದಿಂದ ಮುನ್ನಡೆ ಸಾಧಿಸಿತು. ಇದೇ ಆಟ ಮುಂದುವರೆಸಿ, ಯಾವುದೇ ತಪ್ಪು ಮಾಡದೇ ಆಕ್ರಮಣಕಾರಿ ಆಡಿ ಭಾರತದ ಜೋಡಿಯನ್ನು 21-14ರಿಂದ 2ನೇ ಸೆಟ್ ಗೆದ್ದರು.
ಅಂತಿಮ ಸುತ್ತಿನಲ್ಲೂ ಎಡವಿದ ಭಾರತ:ಅಂತಿಮ ಸುತ್ತಿನಲ್ಲಿ ಭಾರತ ಮತ್ತು ಮಲೇಷ್ಯಾ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಆರಂಭದಲ್ಲಿ, 5-2ರ ಅಂತರದಿಂದ ಹಿನ್ನಡೆಯಲ್ಲಿದ್ದ ಭಾರತದ ಜೋಡಿ ಬಳಿಕ ಉತ್ತಮ ಪ್ರದರ್ಶನದಿಂದ 5-5 ಸೆಟ್ಗಳಿಂದ ಸಮಬಲ ಸಾಧಿಸಿತು. ಎರಡೂ ತಂಡಗಳು ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲದ ಕಾರಣ ಅಂತಿಮ ಸುತ್ತು ರೋಚಕತೆಯಿಂದ ಸಾಗಿತು. ಸಾತ್ವಿಕ್-ಚಿರಾಗ್ ತಮ್ಮ ಅಮೋಘ ದಾಳಿ ಮುಂದುವರೆಸಿ ಮಧ್ಯ ವಿರಾಮದ ಹೊತ್ತಿಗೆ 11-9ರ ಮುನ್ನಡೆಯಲ್ಲಿದ್ದರು. ಈ ವೇಳೆ ಭಾರತ ಗೆಲುವು ಸಾಧಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಮಲೇಷ್ಯಾ ಜೋಡಿ ಕಮ್‌ಬ್ಯಾಕ್ ಮಾಡಿ ಆಟವನ್ನು ತಮ್ಮಡೆಗೆ ತಿರುಗಿಸಿಕೊಂಡು, ಅಂತಿಮವಾಗಿ 21-16 ಸೆಟ್ಗಳಿಂದ ಗೆಲುವು ಸಾಧಿಸಿತು.
ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್: 20 ಕಿ.ಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೆ ನಿರಾಸೆ - Paris Olympics Race Walk