ರಾಜ್ಕೋಟ್(ಗುಜರಾತ್): ಭಾರತ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. 500 ವಿಕೆಟ್‌ಗಳನ್ನು ಕಿತ್ತು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತೀ ಕಡಿಮೆ ಪಂದ್ಯ ಮತ್ತು ಎಸೆತಗಳಲ್ಲಿ 500 ವಿಕೆಟ್‌ಗಳ ಶಿಖರವೇರಿದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಪಂದ್ಯದಲ್ಲಿ ಬ್ಯಾಟರ್ ಝಾಕ್ ಕ್ರಾಲಿ ಅವರ ವಿಕೆಟ್ ಪಡೆಯುವ ಮೂಲಕ ಅನುಭವಿ ಸ್ಪಿನ್ನರ್ ಅಶ್ವಿನ್ 500 ವಿಕೆಟ್‌ಗಳ ಗುರಿ ಮುಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 9ನೇ ಬೌಲರ್ ಆಗಿದ್ದಾರೆ. ಭಾರತದ ಪರ ಅನಿಲ್ ಕುಂಬ್ಳೆ ನಂತರ 500ರ ಗಡಿದಾಟಿದ ಎರಡನೇ 'ಸ್ಪಿನ್' ಜಾದೂಗಾರ ಅಶ್ವಿನ್. ಅದರಲ್ಲೂ, ಅತೀ ಕಡಿಮೆ ಪಂದ್ಯ ಹಾಗೂ ಎಸೆತಗಳಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ ಜಗತ್ತಿನ ಎರಡನೇ ಬೌಲರ್ ಎಂಬ ವಿಶೇಷ ಶ್ರೇಯಸ್ಸಿಗೂ ರವಿಚಂದ್ರನ್ ಭಾಜನರಾಗಿದ್ದಾರೆ.
ಆಸ್ಟ್ರೇಲಿಯಾದ ವೇಗಿ ಗ್ರೆನ್ ಮೆಕ್‌ಗ್ರಾತ್ ಟೆಸ್ಟ್ ಕ್ರಿಕೆಟ್‌ನಲ್ಲಿ 25,528 ಎಸೆತಗಳನ್ನು ಎಸೆದು 500 ವಿಕೆಟ್‌ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ಧಾರೆ. ಈಗ ಆರ್.ಅಶ್ವಿನ್ 25,714 ಬಾಲ್ಗಳಲ್ಲಿ 500 ವಿಕೆಟ್ ಕಿತ್ತು ಅತೀ ಕಡಿಮೆ ಎಸೆತಗಳಲ್ಲಿ ಈ ಸಾಧನೆ ತೋರಿದ ಎರಡನೇ ಬೌರಲ್ ಆಗಿ ಹೊರಹೊಮ್ಮಿದ್ದಾರೆ. ನಂತರದಲ್ಲಿ ಇಂಗ್ಲೆಂಡ್ನ ಮಧ್ಯಮ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ (28,150 ಎಸೆತ), ಸ್ಟುವರ್ಟ್ ಬ್ರಾಡ್ (28,430 ಎಸೆತ) ಹಾಗೂ ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಶ್ (28,833 ಎಸೆತ) ಸ್ಥಾನ ಹೊಂದಿದ್ದಾರೆ.