ಭುವನೇಶ್ವರ್: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ನಲ್ಲಿ ಅತ್ಯದ್ಬುತ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದು ಬಂದಿರುವ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರಕ್ಕೆ ಮರಳಿದೆ. ತವರಿಗೆ ಬಂದ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ರೋಡ್ ಶೋ ಕೂಡ ನಡೆಸಲಾಗಿದೆ.
ಆಟಗಾರರನ್ನು ಅಭಿನಂದಿಸಿದ ಸಿಎಂ ಮಾಝಿ; ಇಲ್ಲಿಯ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಿಂದ ಕಳಿಂಗ ಕ್ರೀಡಾಂಗಣದವರೆಗೆ ನಡೆದ ರೋಡ್‌ಶೋನಲ್ಲಿ ಇಡೀ ಹಾಕಿ ತಂಡ ಭಾಗವಹಿಸಿತು. ನಂತರ ಕಳಿಂಗ ಕ್ರೀಡಾಂಗಣದಲ್ಲಿ ತಂಡವನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಆಟಗಾರರನ್ನು ಅಭಿನಂದಿಸಿದರು.
ಗಮನಾರ್ಹವೆಂದರೆ, ಇಂಡಿಯಾ ಹಾಕಿ ತಂಡ ಒಲಿಂಪಿಕ್ನಲ್ಲಿ ಕಂಚು ಗೆಲ್ಲಲು ಸಹಾಯ ಮಾಡಿದ್ದ ಒಡಿಶಾದ ಸ್ಟಾರ್ ಡಿಫೆಂಡರ್ ಆದ ಅಮಿತ್ ರೋಹಿದಾಸ್ ಅವರಿಗೂ ವಿಶೇಷವಾಗಿ ಸನ್ಮಾನಿಸಲಾಯಿತು. ಜತೆಗೆ ಸಿಎಂ ಮಾಝಿ ಅವರು 4 ಕೋಟಿ ರೂಪಾಯಿಗಳ ವಿಶೇಷ ನಗದು ಬಹುಮಾನ ಘೋಷಿಸಿದರು. ಉಳಿದಂತೆ ತಂಡದ ಎಲ್ಲಾ ಆಟಗಾರರಿಗೂ ತಲಾ 15 ಲಕ್ಷ ರೂಪಾಯಿ ಮತ್ತು ಸಹಾಯಕ ಸಿಬ್ಬಂದಿಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.