ಕರ್ನಾಟಕ

karnataka

ETV Bharat / sports

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್​ ಆದ ನಿತಿನ್​ ಮೆನನ್​​; 20 ವರ್ಷಗಳ ದಾಖಲೆ ಉಡೀಸ್​ - NITIN MENON - NITIN MENON

ಭಾರತದ ಕ್ರಿಕೆಟ್​ ಅಂಪೈರ್​ ನಿತಿನ್​ ಮೆನನ್​​ ಅವರು 20 ವರ್ಷಗಳ ಹಿಂದಿನ ಅಂಪೈರಿಂಗ್​ ದಾಖಲೆಯನ್ನು ಮುರಿದಿದ್ದಾರೆ.

ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್​ ಆದ ನಿತಿನ್​ ಮೆನನ್​​
ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್​ ಆದ ನಿತಿನ್​ ಮೆನನ್​​ (ETV Bharat)

By ETV Bharat Karnataka Team

Published : Jun 17, 2024, 5:15 PM IST

ಹೈದರಾಬಾದ್:ಕ್ರಿಕೆಟ್​ನಲ್ಲಿ ಅಂಪೈರಿಂಗ್​ ವೃತ್ತಿ ಅತಿ ಕಷ್ಟಕರವಾದುದು. ಈಗಿನ ತಾಂತ್ರಿಕ ಯುಗದಲ್ಲಿ ಪ್ರತಿ ಹೆಜ್ಜೆಯೂ ವಿಶ್ಲೇಷಣೆಗೆ ಒಳಪಡಲಿದ್ದು, ಮೈದಾನದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಸವಾಲಿನ ಸಂಗತಿ. ಈ ಎಲ್ಲಾ ಸವಾಲಿನ ನಡುವೆ ಭಾರತದ ಅಂಪೈರ್​ ನಿತಿನ್​ ಮೆನನ್​ ಅವರು ವಿಶಿಷ್ಟ ದಾಖಲೆ ಮಾಡಿದ್ದಾರೆ.

ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ(ಐಸಿಸಿ) ಎಲೈಟ್​ ಪ್ಯಾನೆಲ್​ ಅಂಪೈರ್ಸ್​​ ಪಟ್ಟಿಯಲ್ಲಿರುವ ಭಾರತದ ಏಕೈಕ ತೀರ್ಪುಗಾರರಾಗಿರುವ ನಿತಿನ್​ ಮೆನನ್​ ಅವರು ಅತಿ ಹೆಚ್ಚು ಪಂದ್ಯಗಳಲ್ಲಿ ಮೈದಾನದ ಅಂಪೈರ್​ (ಫೀಲ್ಡ್​ ಅಂಪೈರಿಂಗ್​) ಆಗಿ ಕೆಲಸ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಸಾರಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನ ಅಸ್ಟ್ರೇಲಿಯಾ ಮತ್ತು ನಮೀಬಿಯಾ ನಡುವೆ ಜೂನ್​ 11 ರಂದು ನಡೆದ ಪಂದ್ಯದಲ್ಲಿ ಅಂಪೈರಿಂಗ್​ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು. ನಿತಿನ್​ ಮೆನನ್​​ ಅವರು ಈವರೆಗೆ 126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೈದಾನದ ಅಂಪೈರ್​ ಆಗಿ ತೀರ್ಪು ನೀಡಿದ್ದಾರೆ. ಈ ಮೂಲಕ ಭಾರತದ ಅನುಭವಿ ಅಂಪೈರ್ ಶ್ರೀನಿವಾಸ್ ವೆಂಕಟರಾಘವನ್ ಅವರ 20 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ವೆಂಕಟರಾಘವನ್​ ಅವರು 125 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್​ ಮಾಡಿದ್ದರು.

ಮೆನನ್​ ಅಂಪೈರಿಂಗ್​ ಹೀಗಿದೆ:ನಿತಿನ್​ ಮೆನನ್ ಅವರು ಇಲ್ಲಿಯವರೆಗೆ 23 ಟೆಸ್ಟ್‌ಗಳು, 58 ಏಕದಿನಗಳು ಮತ್ತು 45 ಟಿ20 ಸೇರಿ ಒಟ್ಟು 126 ಪಂದ್ಯಗಳಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಆರು ಟೆಸ್ಟ್‌ಗಳು, 14 ಏಕದಿನಗಳು ಮತ್ತು 24 ಟಿ20 ಪಂದ್ಯಗಳಲ್ಲಿ (ಒಟ್ಟು 44) ಟಿವಿ ಅಂಪೈರ್ ಆಗಿಯೂ ಕೆಲಸ ಮಾಡಿದ್ದಾರೆ.

ವೆಂಕಟರಾಘವನ್ ಅವರು ಆನ್-ಫೀಲ್ಡ್ ಅಂಪೈರ್ ಆಗಿ 73 ಟೆಸ್ಟ್ ಮತ್ತು 52 ಏಕದಿನ ಪಂದ್ಯಗಳಲ್ಲಿ (125 ಪಂದ್ಯಗಳು) ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಟಿ20 ಕ್ರಿಕೆಟ್ ಅಸ್ತಿತ್ವದಲ್ಲಿ ಇರಲಿಲ್ಲ. ಜೊತೆಗೆ 8 ಏಕದಿನ ಮತ್ತು ಐದು ಟೆಸ್ಟ್‌ಗಳಲ್ಲಿ ರೆಫರಿಯಾಗಿ ಕೆಲಸ ಮಾಡಿದ್ದಲ್ಲದೇ, 18 ಏಕದಿನ ಮತ್ತು ಒಂದು ಟೆಸ್ಟ್‌ನಲ್ಲಿ ಟಿವಿ ಅಂಪೈರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

ಏಕೈಕ ಎಲೈಟ್​ ಪ್ಯಾನೆಲ್​ ಅಂಪೈರ್​:ಮಧ್ಯಪ್ರದೇಶದ ಇಂದೋರ್‌ನ 40 ವರ್ಷದ ಮೆನನ್ ಅವರು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಏಕೈಕ ಅಂಪೈರ್ ಆಗಿದ್ದಾರೆ. 2020 ರಲ್ಲಿ ಅವರು ಎಲೈಟ್​ ಪ್ಯಾನೆಲ್​​ನಲ್ಲಿ ಸ್ಥಾನ ಪಡೆದರು. ಅನೇಕ ಹೈವೋಲ್ಟೇಜ್​ ಪಂದ್ಯಗಳು, ಸರಣಿಗಳು ಮತ್ತು ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮೈದಾನದ ಅಂಪೈರ್ ಆಗಿದ್ದಾರೆ. 2023 ರಲ್ಲಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್‌ಗೂ ಅಂಪೈರಿಂಗ್​ ಮಾಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್ ರೋಚಕ ಸೂಪರ್​-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight

ABOUT THE AUTHOR

...view details