ಭುವನೇಶ್ವರ್: ಒಲಿಪಿಂಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಫೆಡರೇಷನ್ ಕಪ್ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಚಿನ್ನದ ಪದಕ ಗೆದ್ದರು. ಬುಧವಾರ ಒಡಿಶಾದ ಕಳಿಂಗ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 82.27 ಮೀಟರ್ ದೂರ ಭರ್ಜಿ ಎಸೆದು ಈ ಸಾಧನೆ ಮಾಡಿದ್ದಾರೆ.
ಮೂರು ವರ್ಷದ ಬಳಿಕ ನೀರಜ್ ತವರು ನೆಲದಲ್ಲಿ ಆಡಿದ ಮೊದಲ ಟೂರ್ನಿ ಇದು. 26 ವರ್ಷದ ಸ್ಟಾರ್ ಅಥ್ಲೀಟ್ ಈ ಸ್ಪರ್ಧೆಯಲ್ಲಿ ಲಯಕ್ಕೆ ಮರಳಲು ಸಮಯ ತೆಗೆದುಕೊಂಡರು. ಆರಂಭದ ಮೂರು ಸುತ್ತುಗಳ ಬಳಿಕ ಎರಡನೇ ಸ್ಥಾನಕ್ಕೆ ತಲುಪಿದ್ದು, 4ನೇ ಮತ್ತು ಅಂತಿಮ ಸುತ್ತಿನಲ್ಲಿ 82.27 ಮೀಟರ್ ಎಸೆತದೊಂದಿಗೆ ಮೊದಲ ಸ್ಥಾನಕ್ಕೇರಿದರು. ಮೊದಲ ಮೂರು ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದ ಕರ್ನಾಟಕದ ಡಿ.ಪಿ.ಮನು 82.06 ಮೀಟರ್ ದೂರ ಭರ್ಜಿ ಎಸೆದು ಬೆಳ್ಳಿಗೆ ತೃಪ್ತಿಪಟ್ಟರು.
ಮೂರು ವರ್ಷದ ಬಳಿಕ ನೀರಜ್ ಫೆಡರೇಷನ್ ಕಪ್ನಲ್ಲಿ ಆಡಿದ್ದಾರೆ. 2021ರಲ್ಲಿ ಕೊನೆಯ ಬಾರಿಗೆ ಈ ಟೂರ್ನಿಯಲ್ಲಿ ಭಾಗಿಯಾಗಿದ್ದ ಅವರು 87.80 ಮೀಟರ್ ದೂರ ಭರ್ಜಿ ಎಸೆದು ಚಿನ್ನಕ್ಕೆ ಕೊರಳೊಡ್ಡಿದ್ದರು. ಇದಕ್ಕೆ ಹೋಲಿಸಿದರೆ ಈ ಬಾರಿ ನೀರಜ್ ಪ್ರಯತ್ನ ಹೇಳಿಕೊಳ್ಳುವ ಮಟ್ಟದಲ್ಲಿರಲಿಲ್ಲ.