ಪ್ಯಾರಿಸ್: ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದ ನವದೀಪ್ ಸಿಂಗ್ ಅವರಿಗೆ ಚಿನ್ನ ಪದಕ ಒಲಿದಿದೆ. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಪ್ಯಾರಾಲಿಂಪಿಕ್ನಲ್ಲಿ ಪುರುಷರ ಜಾವೆಲಿನ್ ಎಫ್41 ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ.
ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್41 ಫೈನಲ್‌ನಲ್ಲಿ ಇರಾನ್‌ನ ಸದೆಗ್ ಬೀತ್ ಸಯಾಹ್ ಚಿನ್ನದ ಪದ ಜಯಿಸಿದ್ದರು. ಭಾರತದ ನವದೀಪ್ ಸಿಂಗ್ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಚಿನ್ನದ ಪದಕ ವಿಜೇತ ಇರಾನ್‌ನ ಕ್ರೀಡಾಪಟು ಸ್ಪರ್ಧೆ ವೇಳೆ ಆಗಾಗ ಆಕ್ಷೇಪಾರ್ಹ ಧ್ವಜವನ್ನು ಪ್ರದರ್ಶಿಸಿದ್ದಕ್ಕಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಬೆಳ್ಳಿ ಗೆದ್ದಿದ್ದ ನವದೀಪ್ಗೆ ಚಿನ್ನದ ಪದಕ ಒಲಿದಿದೆ.
ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಹರಿಯಾಣದ 23 ವರ್ಷದ ಪ್ಯಾರಾ ಅಥ್ಲೀಟ್ ನವದೀಪ್ ಸಿಂಗ್ ಅವರು ಈ ಬಾರಿ ಫೈನಲ್‌ನಲ್ಲಿ 47.32 ಮೀಟರ್ವರೆಗೆ ಭರ್ಚಿ ಎಸೆದು ಉತ್ತಮ ಪ್ರದರ್ಶನ ನೀಡಿದರು. ಆದರೆ ಇರಾನ್‌ನ ಸದೆಗ್ ಬೀತ್ ಸಯಾಹ್ 47.64 ಮೀಟರ್ ದೂರ ಎಸೆದು ಹೊಸ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.
ಆದರೆ ಇರಾನ್ ಸ್ಪರ್ಧಿಯು ತಮ್ಮ ವರ್ತನೆಯಿಂದಾಗಿ ಅನರ್ಹತೆಗೊಂಡರು. ಇದರಿಂದಾಗಿ ನವದೀಪ್ ಬೆಳ್ಳಿ ಪದಕವನ್ನು ಚಿನ್ನಕ್ಕೆ ಏರಿಸಲಾಗಿದೆ. ಇನ್ನು 44.72 ಮೀಟರ್ ದೂರ ಭರ್ಚಿ ಎಸೆದ ಚೀನಾದ ಪೆಂಗ್‌ಕ್ಸಿಯಾಂಗ್ ಬೆಳ್ಳಿ, ಇರಾಕ್‌ನ ನುಖೈಲಾವಿ ವೈಲ್ಡಾನ್ (40.46 ಮೀಟರ್) ಕಂಚಿನ ಪದಕ ಪಡೆದರು.
ಹರಿಯಾಣದ ಪಾಣಿಪತ್‌ನಲ್ಲಿ ಜನಿಸಿದ ನವದೀಪ್ ಆರಂಭದಿಂದಲೂ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಅವರ ತಂದೆ ರಾಷ್ಟ್ರೀಯ ಮಟ್ಟದ ಕುಸ್ತಿಪಟು. ನವದೀಪ್ ಅವರು ಸಾಮಾಜಿಕ ನಿರೀಕ್ಷೆಗಳು ಮತ್ತು ದೈಹಿಕ ವೈಕಲ್ಯಗಳನ್ನು ಮೀರಿ ಅಥ್ಲೆಟಿಕ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ.
ದೆಹಲಿ ವಿವಿಯಲ್ಲಿ ಬಿಎ ಪದವಿ ಪಡೆದ ಬಳಿಕ 2017ರಲ್ಲಿ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್‌ನಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿ, ಚಿನ್ನಕ್ಕೆ ಮುತ್ತಿಟ್ಟರು. ಈ ಗೆಲುವು ನವದೀಪ್ ಕ್ರೀಡಾ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು. ಅವರ ದೃಢಸಂಕಲ್ಪ ಮತ್ತು ಧೈರ್ಯವು ಯಾವುದೇ ಸವಾಲನ್ನು ಜಯಿಸಬಲ್ಲದು ಎಂದು ಸಾಬೀತುಪಡಿಸಿತು. ನವದೀಪ್ 2021 ರ ದುಬೈನಲ್ಲಿ ನಡೆದ ಫಜ್ಜಾ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಐದು ರಾಷ್ಟ್ರೀಯ ಚಿನ್ನದ ಪದಕಗಳನ್ನು ಪಡೆದರು ಮತ್ತು ಅಂತಾರಾಷ್ಟ್ರೀಯ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ನವದೀಪ್ ಸಿಂಗ್, 2022ರಲ್ಲಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹಿನ್ನಡೆ ಅನುಭವಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. ಬಳಿಕ ಜಪಾನ್‌ನ ಕೋಬೆಯಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಚೇತರಿಕೆ ಕಂಡಿದ್ದರು. ಈಗ ಪ್ಯಾರಿಸ್ನಲ್ಲಿ ಮತ್ತೆ ಮಿಂಚಿದ್ದಾರೆ.
ಭಾರತಕ್ಕೆ 16ನೇ ಸ್ಥಾನ:ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಬಾರಿ ಭಾರತ ಉತ್ತಮ ಸಾಧನೆ ಮಾಡಿದೆ. 7 ಚಿನ್ನ, 9 ಬೆಳ್ಳೆ ಮತ್ತು 13 ಕಂಚು ಸೇರಿ ಒಟ್ಟು 29 ಪದಕಗಳನ್ನು ಭಾರತೀಯ ಪ್ಯಾರಾ ಅಥ್ಲೀಟ್ಗಳು ಗೆದ್ದಿದ್ದಿದ್ದಾರೆ. ಈ ಮೂಲಕ ಭಾರತ ಪದಕ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ಸತತ 12 ಗಂಟೆ ಈಜಿದ ಬೆಳಗಾವಿಯ ತಾಯಿ - ಮಗ: ಏಷಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಹೆಸರು ಸೇರ್ಪಡೆ - Mother son set a new record