ಹೈದರಾಬಾದ್:ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಬದಲಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾದ ಬಳಿಕ ಅಭಿಮಾನಿಗಳಿಂದ ಭಾರೀ ಟೀಕೆ ಎದುರಿಸುತ್ತಿದ್ದಾರೆ. ಮುಂಬೈ ಆಡಿದ ಪ್ರತಿ ಪಂದ್ಯದಲ್ಲಿ ಹಾರ್ದಿಕ್ ಅವರನ್ನು ಅಭಿಮಾನಿಗಳು ಕಿಚಾಯಿಸುತ್ತಿದ್ದಾರೆ. ಜೊತೆಗೆ ಪಾಂಡ್ಯ ಪ್ರದರ್ಶನವೂ ಅಷ್ಟಕ್ಕಷ್ಟೇ ಇದೆ. ಇದು ನೆಟ್ಟಿಗರಿಗೆ ಆಹಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಈ ಋತುವಿನ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಕೂಡ ಝಳಪಿಸಿಲ್ಲ. ಇತ್ತ ಬೌಲಿಂಗ್ ಕೂಡ ಮೊನಚು ಕಳೆದುಕೊಂಡಿದೆ. 4 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಹಾರ್ದಿಕ್ 12ರ ಎಕಾನಮಿಯಲ್ಲಿ 132 ರನ್ ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಕೇವಲ ಮೂರು ವಿಕೆಟ್ ಮಾತ್ರ ಪಡೆದಿದ್ದಾರೆ. ಇದು ಹಾರ್ದಿಕ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲು ಕಾರಣವಾಗಿದೆ.
ಫಾರ್ಮ್ನಲ್ಲಿ ಇಲ್ಲದಿದ್ರೂ ಬೌಲಿಂಗ್ ಮಾಡೋದ್ಯಾಕೆ?:ಮುಂಬೈ ತಂಡದ ನಾಯಕ ಹಾರ್ದಿಕ್ ಲಯದಲ್ಲಿಲ್ಲ. ಆದಾಗ್ಯೂ ಅವರು ಬೌಲಿಂಗ್ ಮಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆತ್ ಓವರ್ ಬೌಲಿಂಗ್ ಮಾಡಿ ಮಹೇಂದ್ರ ಸಿಂಗ್ ಧೋನಿಯಿಂದ ಸತತ 3 ಸಿಕ್ಸರ್ ಬಾರಿಸಿಕೊಂಡಿದ್ದರು. ನಿವೃತ್ತರಾದ ಕ್ರಿಕೆಟಿಗನಿಂದ ದಂಡನೆಗೆ ಒಳಗಾದ ಪಾಂಡ್ಯ ಮೇಲೆ ಟ್ರೋಲಿಗರು ಮತ್ತಷ್ಟು ಮುಗಿಬಿದ್ದಿದ್ದಾರೆ. ಅಷ್ಟಕ್ಕೂ ತಂಡದಲ್ಲಿ ತಜ್ಞ ಬೌಲರ್ಗಳು ಇದ್ದರೂ ನಾಯಕನ್ಯಾಕೆ ಬೌಲಿಂಗ್ ಮಾಡುತ್ತಿದ್ದಾನೆ ಎಂಬುದು ಹಲವರ ಪ್ರಶ್ನೆಯಾಗಿದೆ.