ಮುಜಾಫರ್ ಪುರ್: ಶವಗಳನ್ನು ಸುಡುವ, ಸದಾ ದುಃಖದ ಭಾವನೆಗಳಿಂದ ತುಂಬಿರುವ ಸ್ಮಶಾನದಲ್ಲಿಯೂ ಒಂದು ಆಶಾಕಿರಣ ಗೋಚರವಾಗುವಂಥ ಸ್ತುತ್ಯರ್ಹ ಕಾರ್ಯವೊಂದು ಇಲ್ಲಿ ನಡೆಯುತ್ತಿದೆ. ಸ್ಮಶಾನದ ಬಗೆಗಿನ ಸಾಂಪ್ರದಾಯಿಕ ಭಾವನೆಗಳನ್ನು ತೊಡೆದು ಹಾಕಿ, ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡಲು ಬಿಹಾರದ ಮುಜಾಫರ್ ಪುರದ ಸುಮಿತ್ ಕುಮಾರ್ ಎಂಬುವರು ಇಲ್ಲಿನ ಸ್ಮಶಾನದಲ್ಲಿ 'ಅಪ್ಪನ್ ಪಾಠಶಾಲಾ' ಹೆಸರಿನಲ್ಲಿ ಶಾಲೆಯೊಂದನ್ನು ಆರಂಭಿಸಿ ಮಾದರಿಯಾಗಿದ್ದಾರೆ.
ಶಾಲೆ ಅರಂಭಿಸಿರುವ ಬಗ್ಗೆ ಮಾತನಾಡಿದ ಸುಮಿತ್, ಆರಂಭದಲ್ಲಿ ನಾನು ನ್ಯಾಯಾಧೀಶನಾಗಬೇಕೆಂದು ಕನಸು ಕಂಡಿದ್ದೆ. ಆದರೆ ಮಕ್ಕಳಿಗೆ ಕಲಿಸುವ ಕೆಲಸ ಆಕರ್ಷಕವಾಗಿ ಕಾಣಿಸಿದ್ದರಿಂದ ಇಲ್ಲಿನ ಮುಕ್ತಿಧಾಮದಲ್ಲಿ ಶಾಲೆಯನ್ನು ಆರಂಭಿಸಿ ಬಡಕುಟುಂಬಗಳ ಶಿಕ್ಷಣ ವಂಚಿತ ಮಕ್ಕಳಿಗೆ ಇಲ್ಲಿ ಅಕ್ಷರ ಕಲಿಸುತ್ತಿರುವೆ ಎಂದು ಹೇಳಿದರು.
ಶಾಲೆ ಆರಂಭವಾಗಿದ್ದು ಹೇಗೆ?: ಒಂದು ದಿನ ಸುಮಿತ್ ತನ್ನ ಸ್ನೇಹಿತನ ಸಂಬಂಧಿಕರೊಬ್ಬರ ಅಂತಿಮ ವಿಧಿ ವಿಧಾನ ನೆರವೇರಿಸಲು ಮುಕ್ತಿಧಾಮಕ್ಕೆ ಹೋಗಿದ್ದರು. ಆಗ ಸುಡುವ ಚಿತೆಯ ಸುತ್ತಲೂ ಇಡಲಾಗುವ ನಾಣ್ಯ ಮತ್ತು ಹಣ್ಣುಗಳನ್ನು ಬಡ ಮಕ್ಕಳು ಆರಿಸಿಕೊಳ್ಳುವುದನ್ನು ನೋಡಿ ದುಃಖಿತರಾಗಿದ್ದರು.
"ನೀವು ಶಾಲೆಗೆ ಹೋಗುತ್ತೀರಾ?" ಎಂದು ಸುಮಿತ್ ಮಕ್ಕಳಿಗೆ ಪ್ರಶ್ನಿಸಿದರು. "ಶಾಲೆ ಕಲಿತು ಮಾಡುವುದಾದರೂ ಏನು" ಎಂಬ ಮಕ್ಕಳ ಉತ್ತರದಿಂದ ಅವರು ಆಘಾತಕ್ಕೀಡಾದರು. ಶಾಲೆ ಕಲಿತರೆ ಏನೆಲ್ಲವನ್ನು ಸಾಧಿಸಬಹುದು ಎಂಬುದನ್ನು ಆ ಮಕ್ಕಳಿಗೆ ತಿಳಿಸಲು ಕೆಲಸ ಮಾಡುವುದಾಗಿ ಅವರು ಅಲ್ಲಿಯೇ ಪ್ರತಿಜ್ಞೆ ಮಾಡಿದರು.
ನಂತರ ಮಾರ್ಚ್ 2017ರಲ್ಲಿ ಸುಮಿತ್ ಅಲ್ಲಿಯೇ ಶಾಲೆಯನ್ನು ಆರಂಭಿಸಿದ್ದು, ಈಗ ಆ ಸ್ಥಳ ಮಕ್ಕಳ ನಗು ಮತ್ತು ಸಂತೋಷದ ಭಾವನೆಗಳಿಂದ ತುಂಬಿದೆ.
'ಅಪ್ಪನ್' ಪಾಠಶಾಲೆಗೆ ಅಡಿಪಾಯ: ತಮ್ಮ ಮಕ್ಕಳಿಗೆ ಶಾಲಾ ಶಿಕ್ಷಣ ನೀಡಲು ಸಾಧ್ಯವಾಗದ ಅಥವಾ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತಾವು ಈ ಶಾಲೆ ಆರಂಭಿಸಿರುವುದಾಗಿ ಸುಮಿತ್ ಹೇಳುತ್ತಾರೆ. "ಈ ಶಾಲೆಯು ಅವರಿಗೆ ಶಿಕ್ಷಣ ಮಾತ್ರವಲ್ಲದೆ ಅವರ ಉತ್ತಮ ಭವಿಷ್ಯಕ್ಕೆ ಅಡಿಪಾಯವನ್ನೂ ಹಾಕಲಿದೆ" ಎನ್ನುತ್ತಾರೆ ಸುಮಿತ್.
ಸುಮಿತ್ ಏಳು ವರ್ಷಗಳಿಂದ 'ಮುಕ್ತಿಧಾಮ'ದ ಕೊಳೆಗೇರಿ ವಸಾಹತುಗಳ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸಾವಯವ ಕೃಷಿಯ ತಂತ್ರಗಳನ್ನು ಕಲಿಸುತ್ತಿದ್ದಾರೆ. ಮಾರ್ಚ್ 2017 ರಲ್ಲಿ ಆರಂಭವಾದ ಶಾಲೆಗೆ 'ಅಪ್ಪನ್' (ನಮ್ಮದು) ಎಂದು ಹೆಸರಿಸಲಾಯಿತು. ಹೀಗಾಗಿ ಮಕ್ಕಳು ಇದು ತಮ್ಮದೇ ಶಾಲೆ ಎಂದು ಭಾವಿಸುತ್ತಾರೆ.
130 ಮಕ್ಕಳಿಗೆ ಶಿಕ್ಷಣ: ಶಾಲೆ ಪ್ರಾರಂಭವಾದಾಗ ಕೇವಲ 8 ರಿಂದ 10 ಮಕ್ಕಳಿದ್ದರು. ಆದರೆ ಈಗ ಆ ಸಂಖ್ಯೆ 130ಕ್ಕೆ ಹೆಚ್ಚಾಗಿದೆ ಎಂದು ಸುಮಿತ್ ಹೇಳುತ್ತಾರೆ.
"ಮಕ್ಕಳು ಕ್ರಮೇಣ ಶಾಲೆಗೆ ಬರಲಾರಂಭಿಸಿದರು ಮತ್ತು ನಿಧಾನವಾಗಿ ಕಲಿಕೆಗೆ ಹೊಂದಿಕೊಳ್ಳಲಾರಂಭಿಸಿದರು. ಈಗ ಅವರು ನಿಯಮಿತವಾಗಿ ಶಾಲೆಗೆ ಬರುತ್ತಿದ್ದಾರೆ" ಎಂದು ಅವರು ತಿಳಿಸಿದರು. "ತಮ್ಮ ಮಕ್ಕಳನ್ನು ಇತರ ಶಾಲೆಗಳಿಗೆ ದಾಖಲಿಸುವಂತೆಯೂ ನಾವು ಪೋಷಕರಿಗೆ ಪ್ರೋತ್ಸಾಹಿಸುತ್ತೇವೆ. ಪ್ರತಿ ವರ್ಷ ಇಲ್ಲಿನ ಸುಮಾರು 15 ರಿಂದ 20 ಮಕ್ಕಳು ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ದಾಖಲಾಗುತ್ತಾರೆ" ಎಂದು ಅವರು ಹೇಳುತ್ತಾರೆ.
10ನೇ ತರಗತಿಯವರೆಗೆ ಶಿಕ್ಷಣ: ಸುಮಿತ್ ಅವರ ಶಾಲೆಯಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ಈ ಎಲ್ಲಾ ಮಕ್ಕಳಿಗೆ ಅಗತ್ಯವಾದ ಡ್ರೆಸ್, ಬ್ಯಾಗ್, ನೋಟ್ ಬುಕ್ಗಳು, ಪುಸ್ತಕಗಳು, ಪೆನ್ಸಿಲ್ಗಳು ಮತ್ತು ಇತರ ಲೇಖನ ಸಾಮಗ್ರಿಗಳನ್ನು ಸುಮಿತ್ ಅವರೇ ಒದಗಿಸುತ್ತಾರೆ. ಅಲ್ಲದೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಳೆದ 7 ವರ್ಷಗಳಲ್ಲಿ ಅವರು 250ಕ್ಕೂ ಹೆಚ್ಚು ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗಳಿಗೆ ದಾಖಲಿಸಿದ್ದಾರೆ. ಸುಮಿತ್ ಅವರಿಂದ ಪಾಠ ಹೇಳಿಸಿಕೊಳ್ಳುವುದಕ್ಕೆ ನಮಗೆ ಖುಷಿಯಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
"ಈ ಶಾಲೆಯಿಂದಾಗಿ ಮಕ್ಕಳ ಜೀವನವು ಮತ್ತೆ ಹಳಿಗೆ ಬರುತ್ತಿದೆ. ಈಗ ಈ ಮಕ್ಕಳು ಎಂಜಿನಿಯರ್ ಮತ್ತು ವೈದ್ಯರಾಗುವುದಾಗಿ ಹೇಳುತ್ತಿದ್ದಾರೆ. ಈ ಮಕ್ಕಳ ಶಿಕ್ಷಣಕ್ಕಾಗಿ ನಾವು 'ಅಪ್ಪನ್' ಶಾಲೆಯನ್ನು ಪ್ರಾರಂಭಿಸಿದ್ದೇವೆ." ಎಂದು ಸುಮಿತ್ ಹೇಳುತ್ತಾರೆ.
ಸಮಾಜದಲ್ಲಿ ಸಮಾನತೆ ಮೂಡಿಸುವ ಯತ್ನ: ಮಕ್ಕಳು ಅಧ್ಯಯನ ಮಾಡಿ ವಿದ್ಯಾವಂತರಾದರೆ ಮತ್ತು ಸುಸಂಸ್ಕೃತರಾದರೆ ಅವರು ಕೆಟ್ಟ ಸಹವಾಸದಿಂದ ದೂರವಿರುತ್ತಾರೆ ಎಂಬುದು ಸುಮಿತ್ ಅವರ ನಂಬಿಕೆ. "ಶಿಕ್ಷಣವಂತರಾದರೆ ಮಕ್ಕಳು ಶೋಷಣೆಗೆ ಒಳಗಾಗುವುದಿಲ್ಲ; ಅವರ ಸುತ್ತಲಿನ ಜನ ಅವರನ್ನು ನೋಡಿ ಸ್ಫೂರ್ತಿ ಪಡೆಯುತ್ತಾರೆ. ಭವಿಷ್ಯದಲ್ಲಿ ಈ ಮಕ್ಕಳು ತಮ್ಮ ಸಮಾಜಕ್ಕೆ ಮತ್ತು ಅವರ ಕುಟುಂಬಗಳಿಗೆ ಮಾದರಿಯಾಗುತ್ತಾರೆ" ಎಂದು ಅವರು ಹೇಳುತ್ತಾರೆ. "ಈ ಮೂಲಕ ಸಮಾಜದಲ್ಲಿ ಸಮಾನತೆ ಬರುವಂತಾಗುತ್ತದೆ. ಸಮಾಜದಲ್ಲಿ ಮೇಲು ಮತ್ತು ಕೀಳು ಎಂಬ ತಾರತಮ್ಯ ಕೊನೆಗೊಳ್ಳುತ್ತದೆ. ಬಡವನ ಮಗ ಕೂಡ ಅಧಿಕಾರಿಯಾಗಬಹುದು ಎಂಬ ಆಶಾ ಭಾವನೆ ಮೂಡುತ್ತದೆ" ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ : 'ಸಂಸದ ರಾಹುಲ್ ಗಾಂಧಿ ನನ್ನ ಉತ್ತರಾಧಿಕಾರಿ'; ಉತ್ತರಾಖಂಡದ 80 ವರ್ಷದ ಅಂಧ ವೃದ್ಧೆಯ ಘೋಷಣೆ - WOMAN NOMINATES RAHUL GANDHI