ಬೆಂಗಳೂರು: ಉದ್ದೇಶಪೂರ್ವಕವಾಗಿ ಶ್ವಾನಗಳನ್ನು ಸಾಯಿಸಿರುವ ಆರೋಪ ಕೇಳಿಬಂದ ಹಿನ್ನೆಲೆ ರಾಜಧಾನಿಯಲ್ಲಿ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಕೋಳಿಯನ್ನ ತಿಂದಿದೆ ಎಂದು ಆರೋಪಿಸಿ ಮನೆ ಮುಂಭಾಗ ಕಟ್ಟಿಹಾಕಲಾಗಿದ್ದ ನಾಯಿಯನ್ನ ವ್ಯಕ್ತಿಯೋರ್ವ ಕೋಲಿನಿಂದ ಹೊಡೆದು ಸಾಯಿಸಿದರೆ, ಮತ್ತೊಂದೆಡೆ ಮಲಗಿದ ನಾಯಿ ಮೇಲೆ ಚಾಲಕ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೋಳಿ ತಿಂದ ಪ್ರಕರಣದಲ್ಲಿ ನಾಯಿ ಸಾಯಿಸಿದ್ದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದಡಿ ವ್ಯಕ್ತಿ ವಿರುದ್ಧ ವಿದ್ಯಾರಣ್ಯಪುರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರ ವಡೇರಹಳ್ಳಿ ನಿವಾಸಿ ಪುಷ್ಪಲತಾ ನೀಡಿದ ದೂರಿನ ಮೇರೆಗೆ ಎದುರು ಮನೆಯ ನಿವಾಸಿ ಮನೋಜ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರನ್ನು ವಿಚಾರಣೆ ನಡೆಸಿ ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಆಶಾ ಕಾರ್ಯಕರ್ತೆಯಾಗಿರುವ ಪುಷ್ಪಲತಾ ಅವರು ಒಂದು ವರ್ಷದ ಜರ್ಮನ್ ಶೆಪರ್ಡ್ ಶ್ವಾನದ ಜೊತೆಗೆ ಹಸು ಹಾಗೂ ಕೋಳಿಗಳನ್ನ ಸಾಕುತ್ತಿದ್ದರು. ಪ್ರತಿದಿನ ಬೆಳಗ್ಗೆ ಆಹಾರ ನೀಡಿ ಕೆಲಸಕ್ಕೆ ಹೋಗುತ್ತಿದ್ದರು. ಡಿ.24ರಂದು ಮನೆ ಮುಂಭಾಗ ಸಾಕು ನಾಯಿಯನ್ನ ಕಟ್ಟಿಹಾಕಿ ಪುಷ್ಪಲತಾ ಕೆಲಸಕ್ಕೆ ಹೋಗಿದ್ದು, ಸಂಜೆ ಮನೆಗೆ ಹಿಂತಿರುಗಿದಾಗ ಶ್ವಾನದ ಕಣ್ಣು ಹಾಗೂ ಬಾಯಿಗೆ ರಕ್ತದ ಗಾಯವಾಗಿತ್ತು. ಗಾಯದಿಂದ ಚೇತರಿಸಿಕೊಳ್ಳದೆ ಜ.3ರಂದು ನಾಯಿ ಮೃತಪಟ್ಟಿತ್ತು. ಬಳಿಕ ತಮ್ಮ ತೋಟದಲ್ಲೇ ಸಾಕು ನಾಯಿಯನ್ನ ಪುಷ್ಪಲತಾ ಅಂತ್ಯಸಂಸ್ಕಾರ ಮಾಡಿದ್ದರು.
ಶ್ವಾನ ಏಕಾಏಕಿ ಅನಾರೋಗ್ಯದಿಂದ ಮೃತಪಟ್ಟಿರುವ ಬಗ್ಗೆ ಅನುಮಾನ ಬಂದು ಮನೆ ಮುಂದೆ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಮನೋಜ್, ಕೋಲಿನಿಂದ ಮನಬಂದಂತೆ ಥಳಿಸಿರುವುದು ಸೆರೆಯಾಗಿತ್ತು. ಹಲ್ಲೆ ಪ್ರಶ್ನಿಸಿ ಮನೋಜ್ನನ್ನು ಪ್ರಶ್ನಿಸಿದಾಗ ಅಸಭ್ಯವಾಗಿ ಮಾತನಾಡಿ ಹಲ್ಲೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ಮಹಿಳೆ ವಿವರಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಾನು ಸಾಕುತ್ತಿದ್ದ ಕೋಳಿಯನ್ನ ಶ್ವಾನ ತಿಂದಿದ್ದರಿಂದ ಅದಕ್ಕೆ ಹೊಡೆದಿರುವುದನ್ನು ಮನೋಜ್ ಒಪ್ಪಿಕೊಂಡಿದ್ದರು. ಆರೋಪಿ ಸದ್ಯ ಜಾಮೀನು ಪಡೆದು ಬಿಡುಗಡೆಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ..! ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ್ದ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ ಪ್ರಾಣಿ ದಯಾ ಮಂಡಳಿ ಸದಸ್ಯ ಅನಿರುದ್ಧ ಎಂಬುವರು ನೀಡಿದ ದೂರಿನ ಮೇರೆಗೆ ಕಾರು ಚಾಲಕ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಡಿ.31ರ ಸಂಜೆ ರಾಘವನಪಾಳ್ಯ ಬಳಿ ಮಲಗಿದ್ದ ನಾಯಿ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿದ ಪರಿಣಾಮ ಸ್ಥಳದಲ್ಲೇ ನಾಯಿ ಮೃತಪಟ್ಟಿದ್ದು, ಬಳಿಕ ಮೃತದೇಹವನ್ನ ಚೀಲದಲ್ಲಿಟ್ಟು ಸ್ಥಳಾಂತರಿಸಿದ್ದರು. ಈ ಸಂಬಂಧ ಜ.9ರಂದು ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ನಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅನಿರುದ್ಧ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ವಿಚಾರಣೆಗೆ ಬರುವಂತೆ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಯುವತಿಯನ್ನು ಮದುವೆ ಮಾಡಿಕೊಡುವಂತೆ ಕೇಳಲು ಹೋಗಿದ್ದ ವಿವಾಹಿತನ ಹತ್ಯೆ, ನಾಲ್ವರು ಸೆರೆ
ಇದನ್ನೂ ಓದಿ: ಪತ್ನಿ, ಮಗಳು ಸೇರಿ ಮೂವರನ್ನು ಕೊಂದು ಪೊಲೀಸ್ ಠಾಣೆಗೆ ಬಂದ ಆರೋಪಿ; ಬೆಚ್ಚಿಬಿದ್ದ ಬೆಂಗಳೂರು ಜನ