ಮುಂಬೈ:ಐಪಿಎಲ್ನ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ಗಳನ್ನು ಚಚ್ಚಿದೆ. ಆರಂಭದಲ್ಲೇ ವಿಕೆಟ್ ಕಳೆದುಕೊಂಡರು ಬ್ಯಾಟರ್ಗಳು ಎದೆಗುಂದದೆ ಅದ್ಭುತ ಪ್ರದರ್ಶನ ತೋರಿದ್ದಾರೆ. ತಂಡದ ಸ್ಕೋರ್ 8 ರನ್‌ಗಳಾಗಿದ್ದ ವೇಳೆ ಅಜಿಂಕ್ಯ ರಹಾನೆ (5) ಕ್ಯಾಚಿಟ್ಟು ಪೆವಿಲಿಯನ್ ಸೇರಿದರು. ಮತ್ತೊಂದೆಡೆ ಉತ್ತಮ ಪ್ರದರ್ಶನ ತೋರುತ್ತಿದ್ದ ರಚಿನ್ ರವೀಂದ್ರ (21) ಶ್ರೇಯಸ್ ಗೋಪಾಲ್ ಎಸೆತಕ್ಕೆ ಬಲಿಯಾದರು. ಈ ವೇಳೆ ನಾಯಕ ರುತುರಾಜ್ ಗಾಯಕ್ವಾಡ್ (69) ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡು 40 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಸ್ಕೋರ್ಗೆ ಅಮೋಘ ಕೊಡುಗೆ ನೀಡಿ ಪೆವಿಲಿಯನ್ ಸೇರಿದರು.
ಮತ್ತೊಂದೆಡೆ ಶಿವಂ ದುಬೆ ಕೂಡ ಹೊಡಿ ಬಡಿ ಆಟವಾಡಿ 38 ಎಸೆತಗಳಲ್ಲಿ ಅಜೇಯವಾಗಿ 66 ರನ್ಗಳನ್ನು ಸಿಡಿಸಿದರು. ಗಾಯಕ್ವಾಡ್ ಬಳಿಕ ಕ್ರೀಸ್ಗೆ ಬಂದಿದ್ದ ಮಿಚೆಲ್ (17) ವಿಕೆಟ್ ಬಿದ್ದ ತಕ್ಷಣ ಕ್ರೀಸ್ಗೆ ಬಂದ ಧೋನಿ ಬೆಂಕಿ ಪ್ರದರ್ಶನ ತೋರಿದರು. ಕೊನೆಯ ಓವರ್ನ ನಾಲ್ಕು ಎಸೆತಗಳನ್ನು ಎದುರಿಸಿದ ಅವರು ಹ್ಯಾಟ್ರಿಕ್ 3 ಸಿಕ್ಸರ್ ಸಮೇತ ಅಜೇಯ 20 ರನ್ಗಳಿಸಿ ತಂಡದ ಸ್ಕೋರ್ 206ರ ಗಡಿಗೆ ಕೊಂಡೊಯ್ಯಲು ನೆರವಾದರು. ಮುಂಬೈ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
ಪ್ರಸಕ್ತ ಋತುವಿನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿದ್ದ ಮುಂಬೈ ಮೊದಲ 3 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದ್ದು ಎರಡು ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಚೆನ್ನೈ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಮುಂಬೈ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.