ಬ್ರಿಡ್ಜ್‌ಟೌನ್(ಬಾರ್ಬಡೋಸ್):2024ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ. ದಶಕದ ಬಳಿಕ ಐಸಿಸಿ ಪ್ರಶಸ್ತಿಯ ಬರ ನೀಗಿಸುವ ಹುಮ್ಮಸ್ಸಿನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇದ್ದರೆ, ಎದುರಾಳಿ ಹರಿಣಗಳು ತಮ್ಮ ಮೊದಲ ವಿಶ್ವ ಟಿ-20 ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಜೂನ್ 29ರಂದು ಫೈನಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಂತೆಯೇ ಅಜೇಯರಾಗಿ ಟಿ-20 ವಿಶ್ವಕಪ್ ಫೈನಲ್ ಹಂತಕ್ಕೆ ರೋಹಿತ್ ಶರ್ಮಾ ಬಳಗ ತಲುಪಿದೆ. ಟ್ರೋಫಿ ಗೆಲ್ಲುವ ಹಾದಿಯಲ್ಲಿ ಆಸ್ಟ್ರೇಲಿಯಾ ಎಂಬ ಬಲಿಷ್ಠ ಎದುರಾಳಿಯನ್ನು ಈ ಬಾರಿ ಟೀಂ ಇಂಡಿಯಾ ಹೊಂದಿಲ್ಲ. ಬದಲಿಗೆ, ದಶಕಗಳ ಕಾಲ ಐಸಿಸಿ ಟ್ರೋಫಿಯನ್ನೇ ಕಾಣದ ದಕ್ಷಿಣ ಆಫ್ರಿಕಾದೊಂದಿಗೆ ಪ್ರಶಸ್ತಿಗಾಗಿ ಹೋರಾಟ ಏರ್ಪಟ್ಟಿದೆ.
1998ರ ಚಾಂಪಿಯನ್ಸ್ ಟ್ರೋಫಿಯಲ್ಲಿ (ಆಗಿನ ಐಸಿಸಿ ನಾಕ್-ಔಟ್ ಟ್ರೋಫಿ) ಹರಿಣಗಳು ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಇದರ ನಂತರ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಅಲ್ಲದೇ, ಪ್ರತಿ ಸೆಮಿ ಫೈನಲ್‌ನಲ್ಲಿ ಸೋಲುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ 'ಚೋಕರ್ಸ್' ಎಂಬ ಹಣೆಪಟ್ಟಿ ಹೊಂದಿದ್ದರು. ಆದರೆ, ಈಗ 'ಚೋಕರ್ಸ್' ಅಪಖ್ಯಾತಿಯನ್ನು ಅಳಿಸಿ ಹಾಕಿ ತಮ್ಮದೇ ಆದ ಭರವಸೆ ಮತ್ತು ಕನಸುಗಳೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಭಾರತ: ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಟೀಂ ಇಂಡಿಯಾ ಮಣಿಸಿ ಫೈನಲ್ ಪ್ರವೇಶಿಸಿದೆ. ಹೀಗಾಗಿ ಕ್ರಿಕೆಟ್ ಫ್ಯಾನ್ಸ್ ಮತ್ತು ಪರಿಣಿತರ ಪ್ರಕಾರ, ರೋಹಿತ್ ಬಳಗವು ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ಇದು 2023ರ ಏಕದಿನ ವಿಶ್ವಕಪ್ ಫೈನಲ್ ಕಹಿ ಮರೆಸುವ ನಿರೀಕ್ಷೆಯನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೊಂದಿದ್ದಾರೆ. ತಂಡದ ರಚನೆ ಮತ್ತು ಕೆರಿಬಿಯನ್ ವಾತಾವರಣವೂ ಇದಕ್ಕೆ ಪುಷ್ಠಿ ನೀಡುವಂತಿದೆ.
''ಭಾರತ ದೀರ್ಘಕಾಲದವರೆಗೆ ಐಸಿಸಿ ಫೈನಲ್‌ನಲ್ಲಿ ತಮ್ಮ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ಗೊತ್ತು. ಆದರೆ, ದಕ್ಷಿಣ ಆಫ್ರಿಕಾ ಸವಾಲಿಗೆ ಅಣಿಯಾಗುತ್ತದೆ ಎಂದು ಭಾವಿಸಿಲ್ಲ. ಟೀಂ ಇಂಡಿಯಾ ಇಲ್ಲಿಯವರೆಗೆ ಪಂದ್ಯಾವಳಿಯ ಅತ್ಯುತ್ತಮ ಹಾಗೂ ದಕ್ಷಿಣ ಆಫ್ರಿಕಾ ದುರ್ಬಲ ತಂಡವಾಗಿದೆ'' ಎಂದು ವಿಶ್ವಕಪ್ ವಿಜೇತದ ಮಾಜಿ ನಾಯಕರೊಬ್ಬರು ಗಯಾನಾದಿಂದ ಬಾರ್ಬಡೋಸ್‌ಗೆ ಹೊರಟಿದ್ದ ವಿಮಾನದಲ್ಲಿ 'ಪಿಟಿಐ' ಸುದ್ದಿಸಂಸ್ಥೆಗೆ ತಿಳಿಸಿದರು.
ದ್ರಾವಿಡ್‌ಗೆ ಸಿಗುತ್ತಾ ಗೆಲುವಿನ ವಿದಾಯ?: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಅವರಿಗೆ ಇದು ಕೊನೇಯ ಟೂರ್ನಿ. 2007ರಲ್ಲಿ ಕೆರಿಬಿಯನ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಿಂದ ದ್ರಾವಿಡ್ ಮುಂದಾಳತ್ವದ ತಂಡ ಹೊರಬಿದ್ದಿತ್ತು. ಈಗ ತಂಡವು ಬಲಿಷ್ಠವಾಗಿದ್ದು, ಅದೇ ಕೆರಿಬಿಯನ್ ನಾಡಿನಿಂದಲೇ ಕೋಚ್ ದ್ರಾವಿಡ್ ಅವರಿಗೆ ಗೆಲುವಿನ ವಿದಾಯ ನೀಡಲು ಸೂಕ್ತ ಸಮಯ ಸಿಕ್ಕಂತಿದೆ!.
ಅಲ್ಲದೇ, ಟಿ-20 ವಿಶ್ವಕಪ್ ಟೂರ್ನಿಯಲ್ಲಿ 10 ವರ್ಷಗಳ ಬಳಿಕ ಭಾರತ ಫೈನಲ್‌ಗೇರಿದೆ. ರೋಹಿತ್ ನೇತೃತ್ವದ 11ರ ಬಳಗವು ಪ್ರಶಸ್ತಿಯ ಫೆವರಿಟ್ ಆಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಂತೆ, ಈ ಟೂರ್ನಿಯಲ್ಲೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದಾಗ್ಯೂ, ವಿರಾಟ್ ಮೇಲೆ ನಿರೀಕ್ಷೆ ಕಡಿಮೆಯಾಗಿಲ್ಲ.
''ಫೈನಲ್‌ನಲ್ಲಿ ಆ ನಿರೀಕ್ಷೆಯನ್ನು ಅವರು ಉಳಿಸುತ್ತಾರೆ'' ಎಂದು ಖುದ್ದು ನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮಧ್ಯಮ ಕ್ರಮಾಂಕದಲ್ಲಿ ಒತ್ತಡದ ಮಧ್ಯೆಯೂ ಶಿವಂ ದುಬೆ ಮಿಂಚುತ್ತಿದ್ದಾರೆ. ಕುಲದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಆಗಿದ್ದು, 11ರ ಬಳಗವು ಸ್ಥಾನ ಪಡೆಯುವುದು ಖಚಿತ. ವೇಗಿಗಳು ಮತ್ತು ಸ್ಪಿನ್ನರ್‌ಗಳು ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸುವುದರ ಬಗ್ಗೆಯೂ ತಂಡಕ್ಕೆ ತಲೆನೋವಿಲ್ಲ.