ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಡಬಲ್ ಪದಕ ವಿಜೇತೆ ಮತ್ತು ಮಹಿಳಾ ಶೂಟರ್ ಮನು ಭಾಕರ್ ಅವರು ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿರುವ ಕೆಲವು ನೆಟ್ಟಿಗರು, ನೀವು ನೀರಜ್‌ರನ್ನು ಮದುವೆಯಾಗುತ್ತೀರಾ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಇಬ್ಬರ ನಡುವಿನ ಸ್ನೇಹ ಸಂಬಂಧದ ವದಂತಿಗಳು ಹರಿದಾಡಿದ್ದವು. ನಂತರ ಒಲಿಂಪಿಕ್ಸ್ ವೇಳೆ ಮನು ಭಾಕರ್ ಅವರ ತಾಯಿ ನೀರಜ್ ಅವರನ್ನು ಭೇಟಿಯಾಗಿ ಹತ್ತಿರದ ಸಂಬಂಧಿಯಂತೆ ಮಾತನಾಡಿಸಿದ್ದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ ಈ ವಿಡಿಯೋದಲ್ಲಿ ಮನು ಮತ್ತು ನೀರಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ದಿನಕ್ಕೊಂದು ವದಂತಿ ಹರಿದಾಡಲಾರಂಭಿಸಿದೆ.
ಈ ಕುರಿತು ಮೌನ ಮುರಿದ ಮನು ತಂದೆ, "ಆಕೆ ಇನ್ನೂ ಚಿಕ್ಕವಳು. ಮದುವೆ ವಯಸ್ಸಾಗಿಲ್ಲ. ಈ ಬಗ್ಗೆ ನಾವು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ" ಎಂದು ವದಂತಿಗಳಿಗೆ ತೆರೆ ಎಳೆದಿದ್ದರು.
ಇದೀಗ ಮನ ತಮ್ಮ 'ಎಕ್ಸ್' ಖಾತೆಯಲ್ಲಿ ನೀರಜ್ಗೆ ಅಭಿನಂದನೆ ಸಲ್ಲಿಸಿರುವ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೆ ಮತ್ತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ.