ಕೌಲಾಲಂಪುರ್ (ಮಲೇಷ್ಯಾ): ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಿಂಧು ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ವಿಶ್ವದ 34ನೇ ಶ್ರೇಯಾಂಕದ ಷಟ್ಲರ್ ಸಿಮ್ ಯು ಜಿನ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ 59 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 21-13, 12-21 ಮತ್ತು 21-14ರ ಅಂತರದಿಂದ ದಕ್ಷಿಣ ಕೊರಿಯಾದ ಆಟಗಾರ್ತಿಯನ್ನು ಸೋಲಿಸಿದರು. ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ನಲ್ಲಿ ವಿಶ್ವದ 6ನೇ ಶ್ರೇಯಾಂಕಿತೆ, ಚೀನಾದ ಹಾನ್ ಯುವೆ ಅವರನ್ನು ಭಾರತದ ಪಟು ಎದುರಿಸಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಭಾರತದ ಅಶ್ಮಿತಾ ಚಲಿಹಾ ಕೂಡ ಗೆಲುವು ಸಾಧಿಸಿದ್ದಾರೆ. ವಿಶ್ವದ 10ನೇ ಶ್ರೇಯಾಂಕಿತೆ, ಅಮೆರಿಕದ ಬೀವೆನ್ ಜಾಂಗ್ ಅವರನ್ನು 53ನೇ ಶ್ರೇಯಾಂಕಿತೆ ಅಶ್ಮಿತಾ ಮಣಿಸಿದ್ದಾರೆ. 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 24ರ ಹರೆಯದ ಅಶ್ಮಿತಾ 21-19, 16-21, 21-12 ಅಂತರರಿಂದ ಬೀವೆನ್ ಜಾಂಗ್ ಅವರನ್ನು ಸೋಲಿಸಿ ಆಘಾತ ನೀಡಿದ್ದಾರೆ.
ಮತ್ತೊಂದೆಡೆ, ಭಾರತದ ಮಹಿಳಾ ಡಬಲ್ಸ್ ಜೋಡಿಗಳಾದ ಸಿಮ್ರಾನ್ ಸಿಂಘಿ ಮತ್ತು ರಿತಿಕಾ ಠಾಕರ್ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಮಲೇಷ್ಯಾದ ಜೋಡಿಯಾದ ಪರ್ಲಿ ಟಾನ್ ಮತ್ತು ತಿನಾ ಮುರಳೀಧರನ್ ವಿರುದ್ಧ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-17, 21-11ರಿಂದ ಭಾರತದ ಜೋಡಿ ಪರಾಭವಗೊಂಡಿದೆ.
ಇನ್ನೊಂದು ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಸಹ ಸೋತಿದ್ದಾರೆ. ಈ ಜೋಡಿಯು ಚೈನೀಸ್ ತೈಪೆ ಜೋಡಿಯಾದ ಯು ಚಿಯೆನ್ ಹುಯಿ ಮತ್ತು ಸುಂಗ್ ಶುವೊ ಯುನ್ ವಿರುದ್ಧ 18-21, 22-20, 14-21ರಿಂದ ಸೋತಿದೆ.
ಕೌಲಾಲಂಪುರದಲ್ಲಿ ಮಲೇಷ್ಯಾ ಮಾಸ್ಟರ್ಸ್ ಮೇ 21ರಿಂದ ಆರಂಭವಾಗಿದ್ದು, ಮೇ 26ರವರೆಗೆ ನಡೆಯಲಿದೆ. ಇದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ವರ್ಲ್ಡ್ ಟೂರ್ ಸೂಪರ್ 500 ಮಟ್ಟದ ಪಂದ್ಯಾವಳಿಯಾಗಿದೆ. ಪಿ.ವಿ.ಸಿಂಧು 2013 ಮತ್ತು 2016ರಲ್ಲಿ ಎರಡು ಬಾರಿ ಮಹಿಳಾ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದಿದ್ದರು. 2017ರಲ್ಲಿ ಭಾರತದ ಮತ್ತೊಬ್ಬ ತಾರೆ ಸೈನಾ ನೆಹ್ವಾಲ್ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಕಳೆದ ವರ್ಷ ಫೈನಲ್‌ನಲ್ಲಿ ಹೆಚ್.ಎಸ್.ಪ್ರಣಯ್ ಸಹ ಚೀನಾದ ವೆಂಗ್ ಹಾಂಗ್ಯಾಂಗ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿದ್ದರು.
ಇದನ್ನೂ ಓದಿ:IPL 2024: ರಾಜಸ್ಥಾನ ತಂಡದ ನಾಯಕರಾಗಿ 31 ಪಂದ್ಯ ಗೆದ್ದು ಶೇನ್ ವಾರ್ನ್ ದಾಖಲೆ ಸರಿಗಟ್ಟಿದ ಸ್ಯಾಮ್ಸನ್