ಮುಂಬೈ:ಶುಕ್ರವಾರ ನಡೆದ ಐಪಿಎಲ್ನ 67ನೇ ಪಂದ್ಯದಲ್ಲಿ ಮುಂಬೈ ವಿರುದ್ಧದ ಲಕ್ನೋ ಸೂಪರ್ ಜೈಂಟ್ಸ್ 18 ರನ್‌ಗಳ ಗೆಲುವು ಸಾಧಿಸಿ 17ನೇ ಆವೃತ್ತಿಗೆ ವಿದಾಯ ಹೇಳಿತು.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಇದಕ್ಕುತ್ತರವಾಗಿ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರಸಕ್ತ ಟೂರ್ನಿಯಲ್ಲಿ ಮುಂಬೈ 10ನೇ ಸೋಲು ಕಂಡು ಐಪಿಎಲ್ ಅಭಿಯಾನವನ್ನು ಮುಕ್ತಾಯಗೊಳಿಸಿತು. ಮತ್ತೊಂದೆಡೆ, ಲಕ್ನೋ 7ನೇ ಗೆಲುವಿನೊಂದಿಗೆ 17ನೇ ಆವೃತ್ತಿಗೆ ವಿದಾಯ ಹೇಳಿತು.
ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಉತ್ತಮ ಆರಂಭ ಪಡೆದಿತ್ತು. ಆದರೇ ನಾಲ್ಕನೇ ಓವರ್‌ನಲ್ಲಿ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಸುಮಾರು 44 ನಿಮಿಷಗಳ ವಿಳಂಬದ ನಂತರ ಪಂದ್ಯ ಪುನಾರಂಭವಾಯಿತು. ರೋಹಿತ್ ಮತ್ತು ಬ್ರೂವಿಸ್ ಮೊದಲ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವಿತ್ತು. ಬ್ರೂಯಿಸ್ 23 ರನ್ ಗಳಿಸಿ ನಿರ್ಗಮಿಸಿದರು.
ಬಳಿಕ ಬಂದ ಸೂರ್ಯಕುಮಾರ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಶೂನ್ಯಕ್ಕೆ ನಿರ್ಗಮಿಸಿದರು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 38 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 68 ರನ್ ಗಳಿಸಿ ಹೈಸ್ಕೋರರ್ ಎನಿಸಿಕೊಂಡರು. ಉಳಿದಂತೆ ನಾಯಕ ಹಾರ್ದಿಕ್ (16), ನೆಹಾಲ್ (1) ಮತ್ತು ಇಶಾನ್ (14) ರನ್ ಗಳಿಸಿ ಔಟಾದರು. ಕೊನೆಯ ಓವರ್‌ನಲ್ಲಿ ನಮನ್ ಧೀರ್ ಬಿರುಸಿನ ಬ್ಯಾಟ್ ಮಾಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ನಮನ್ 28 ಎಸೆತಗಳಲ್ಲಿ ಅಜೇಯವಾಗಿ 62 ರನ್ ಚಚ್ಚಿದರು. ಲಕ್ನೋ ಪರ ನವೀನ್ ಉಲ್ ಹಖ್ ಮತ್ತು ರವಿ ಬಿಸ್ಣೋಯಿ ತಲಾ ಎರಡು ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪುರನ್ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಲಕ್ನೋ ಪರ ಪುರನ್ 75ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇದಕ್ಕೂ ಮುನ್ನ ತಂಡ ಆರಂಭಿಕ ಹಿನ್ನಡೆ ಅನುಭವಿಸಿತ್ತು. ಮೊದಲ ಓವರ್‌ನಲ್ಲಿಯೇ ಓಪನರ್ ದೇವದತ್ ಪಡಿಕಲ್ ಖಾತೆ ತೆರೆಯದೆ ನಿರ್ಗಮಿಸಿದರು. ಬಳಿಕ ಮಾರ್ಕಸ್ ಸ್ಟೈನಿಸ್ (28), ದೀಪಕ್ ಹೂಡಾ (11) ಬಹುಬೇಗ ನಿರ್ಗಮಿಸಿದರು. ಈ ವೇಳೆ ನಾಲ್ಕನೇ ವಿಕೆಟ್‌ಗೆ ರಾಹುಲ್ ಮತ್ತು ಪುರನ್ ಶತಕದ ಜೊತೆಯಾಟವಾಡಿ ನಿರ್ಗಮಿಸಿದರು. ನಂತರ ಆಯುಷ್ ಬಡೋನಿ (22) ಮತ್ತುಕೃನಾಲ್ (12*) ಸೇರಿ ತಂಡದ ಸ್ಕೋರ್ 200ರ ಗಡಿ ದಾಟಿಸಲು ನೆರವಾದರು. ಮುಂಬೈ ಪರ ನುವಾನ್ ತುಷಾರ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್ ಪಡೆದು ಮಿಂಚಿದರು.
ಸೋಲು - ಗೆಲುವಿನೊಂದಿಗೆ ವಿದಾಯ:ಪ್ರಸಕ್ತ ಟೂರ್ನಿಯಲ್ಲಿ ಮುಂಬೈ 10ನೇ ಸೋಲು ಕಂಡು ಐಪಿಎಲ್ ಅಭಿಯಾನವನ್ನು ಮುಕ್ತಾಯಗೊಳಿಸಿತು. ಮತ್ತೊಂದೆಡೆ, ಲಕ್ನೋ 7ನೇ ಗೆಲುವಿನೊಂದಿಗೆ 17ನೇ ಆವೃತ್ತಿಗೆ ವಿದಾಯ ಹೇಳಿತು. ಲಕ್ನೋ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಮುಂಬೈ ತಂಡ ಕೊನೆಯ ಸ್ಥಾನದಲ್ಲೇ ಉಳಿತು.
ಇದನ್ನೂ ಓದಿ:IPL 2024: ಮುಂಬೈ ಇಂಡಿಯನ್ಸ್ ಗೆಲುವಿಗೆ 215 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ ಲಖನೌ - MI VS LSG