ಪರ್ತ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ಲಿಸ್ಟ್ ಎ ಏಕದಿನ ಕಪ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಹಿರಿಯ ಮತ್ತು ಯುವ ಆಟಗಾರರು ಭಾಗಿಯಾಗಿದ್ದಾರೆ. ಇಂದು ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ತಾಸ್ಮೇನಿಯಾ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ತಾಸ್ಮೇನಿಯಾದ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟರ್ನ್ ಆಸ್ಟ್ರೇಲಿಯಾ ಕೇವಲ ಒಂದು ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡು ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ದಾಖಲೆ ನಿರ್ಮಿಸಿತು.
ಟಾಸ್ ಗೆದ್ದ ತಾಸ್ಮೇನಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ, ಬ್ಯಾಟಿಂಗ್‌ಗಿಳಿದ ವೆಸ್ಟರ್ನ್ ಆಸ್ಟ್ರೇಲಿಯಾ 53 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 52 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಒಂದು ರನ್ ಅಂತರದಲ್ಲಿ ಎಲ್ಲ 8 ವಿಕೆಟ್‌ಗಳನ್ನು ಕಳೆದುಕೊಂಡಿತು.
16ನೇ ಓವರ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ವೆಸ್ಟರ್ನ್ ಆಸ್ಟ್ರೇಲಿಯಾ ನಂತರ ವೆಬ್‌ಸ್ಟರ್ ಬೌಲಿಂಗ್ ದಾಳಿಗೆ ತತ್ತರಿಸಿತು. 17ನೇ ಓವರ್‌ನಲ್ಲಿ ಬಿಲ್ಲಿ ಸ್ಟಾನ್‌ಲೇಕ್ ಎರಡು ವಿಕೆಟ್ ಪಡೆದರು. ಮುಂದಿನ ಓವರ್‌ನ ಕೊನೆಯ ಎಸೆತದಲ್ಲಿ ವೆಬ್‌ಸ್ಟರ್ ಮತ್ತೊಂದು ವಿಕೆಟ್ ಉರುಳಿಸಿದರು. 20ನೇ ಓವರ್‌ನಲ್ಲಿ ಮತ್ತೆರಡು ಹಾಗೂ ಮುಂದಿನ ಓವರ್‌ನಲ್ಲಿ ಹತ್ತನೇ ವಿಕೆಟ್ ಕಿತ್ತರು. ಇದರೊಂದಿಗೆ ಪಶ್ಚಿಮ ಆಸ್ಟ್ರೇಲಿಯಾ 20.1 ಓವರ್‌ಗಳಲ್ಲಿ 53 ರನ್‌ಗಳಿಗೆ ಆಲೌಟ್ ಆಯಿತು.