ಕರ್ನಾಟಕ

karnataka

ETV Bharat / sports

ಕೋಲ್ಕತ್ತಾಗೆ ಶರಣಾದ ಮುಂಬೈ: ಪ್ಲೇ ಆಫ್​ ರೇಸ್​ನಿಂದ ಹೊರಕ್ಕೆ - KKR Beat MI - KKR BEAT MI

ಕೆಕೆಆರ್​ ವಿರುದ್ಧ ಮುಂಬೈ ಇಂಡಿಯನ್ಸ್​​​ 24 ರನ್​ಗಳಿಂದ ಸೋಲನುಭವಿಸಿದೆ.

ಕೋಲ್ಕತ್ತಾಗೆ ಶರಣಾದ ಮುಂಬೈ: ಪ್ಲೇ ಆಫ್​ ರೇಸ್​ನಿಂದ ಹೊರಕ್ಕೆ (IANS)
ಕೋಲ್ಕತ್ತಾಗೆ ಶರಣಾದ ಮುಂಬೈ: ಪ್ಲೇ ಆಫ್​ ರೇಸ್​ನಿಂದ ಹೊರಕ್ಕೆ (IANS) (Etv Bharat)

By PTI

Published : May 4, 2024, 6:47 AM IST

Updated : May 4, 2024, 7:22 AM IST

ಮುಂಬೈ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್​ ತಂಡಗಳಲ್ಲಿ ಒಂದು ಎನಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್​ ಕಳಪೆ ಪ್ರದರ್ಶನದಿಂದಾಗಿ ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದಿದೆ.

ವಾಂಖೆಡೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಹಾರ್ದಿಕ್​ ಬಳಗ ಹೀನಾಯ ಸೋಲನುಭವಿಸಿದೆ. ಕೆಕೆಆರ್​ ನೀಡಿದ್ದ 170 ರನ್​ಗಳ ಗುರಿಯನ್ನು ಬೆನ್ನತ್ತಿದ ಮುಂಬೈ, ಶ್ರೇಯಸ್​ ಪಡೆಯ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ 18.5 ಓವರ್​ಗಳಲ್ಲಿ 145ಕ್ಕೆ ಸರ್ವಪತನ ಕಂಡಿತು. ಸೂರ್ಯ ಕುಮಾರ್​ ಯಾದವ್​ (56), ಟಿಮ್​ ಡೇವಿಡ್​ (24) ಹೊರತು ಪಡಿಸಿ ಯಾವೊಬ್ಬ ಬ್ಯಾಟರ್ ​ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ 24 ರನ್​ಗಳಿಂದ ಮುಂಬೈ ಸೋಲೊಪ್ಪಿಕೊಂಡಿತು.

ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು 8ರಲ್ಲಿ ಸೋಲನ್ನು ಕಂಡು ಟ್ರೋಫಿ ಗೆಲ್ಲುವ ಕನಸನ್ನೂ ಕೈಚೆಲ್ಲಿತು. ಕೋಲ್ಕತ್ತಾ ಪರ ಸ್ಟಾರ್ಕ್​ 4 ವಿಕೆಟ್​ ಕಿತ್ತರೆ, ವರುಣ್​ ಚಕ್ರವರ್ತಿ, ಸುನಿಲ್​ ನರೈನೆ, ರಸ್ಸೆಲ್​ ತಲಾ 2 ವಿಕೆಟ್​ ಉರುಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್​ ಮಾಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 19.5 ಓವರ್​ಗಳಲ್ಲಿ 169 ರನ್​ಗಳಿಗೆ ಆಲೌಟ್ ಆಯಿತು. 57 ರನ್​ಗಳಿಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ವೆಂಕಟೇಶ್ ಅಯ್ಯರ್ ಆಸರೆಯಾದರು. 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 70 ರನ್ ಚಚ್ಚಿ ಹೈಸ್ಕೋರರ್​​ ಎನಿಸಿಕೊಂಡರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕ್ರೀಸ್​ಗೆ ಬಂದ ಮನೀಶ್ ಪಾಂಡೆ ಕೂಡ 42 ರನ್​ಗಳ ಕೊಡುಗೆ ನೀಡಿದರು. 31 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು.

ವೆಂಕಟೇಶ್ ಮತ್ತು ಮನೀಶ್ ಆರನೇ ವಿಕೆಟ್​ಗೆ 83 ರನ್​ಗಳ ಜೊತೆಯಾಟವಾಡಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಮತ್ತು ನುವಾನ್ ತುಷಾರ ತಲಾ 3 ವಿಕೆಟ್ ಪಡೆದರೇ, ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್​ ಕಿತ್ತರು.

ಪಂದ್ಯದ ದಾಖಲೆಗಳು

12 ವರ್ಷಗಳ ಬಳಿಕ ಕೆಕೆಆರ್​ಗೆ ಗೆಲುವು:ವಾಂಖೆಡೆ ಮೈದಾನದಲ್ಲಿ ಕೆಕೆಆರ್​ ತಂಡ 12 ವರ್ಷಗಳ ಬಳಿಕ ಗೆಲುವು ಸಾಧಿಸಿತು. 2012ರಲ್ಲಿ ಮೊದಲ ಬಾರಿಗೆ ಈ ಮೈದಾನದಲ್ಲಿ ಕೆಕೆಆರ್​ ಗೆಲುವು ಸಾಧಿಸಿತ್ತು.

4ನೇ ಬಾರಿಗೆ ಎರಡೂ ತಂಡಗಳು ಆಲೌಟ್​:ಈ ಪಂದ್ಯದಲ್ಲಿ ಎರಡೂ ತಂಡಗಳು ಆಲೌಟ್​ ಆಗಿದ್ದು ಇದು ಐಪಿಎಲ್​ ಇತಿಹಾಸದಲೇ 4ನೇ ಬಾರಿಗೆ ಪಂದ್ಯ ಒಂದರಲ್ಲಿ ಎರಡೂ ತಂಡಗಳು ಆಲೌಟ್​ ಆಗಿವೆ. ಇದಕ್ಕೂ ಮೊದಲು 2010, 2017 ಮತ್ತು 2018ರಲ್ಲಿ ಈ ದಾಖಲೆಯಾಗಿತ್ತು.

ಇದನ್ನೂ ಓದಿ:ಏಕದಿನ, ಟಿ20 ಕ್ರಿಕೆಟ್‌ಗೆ ಭಾರತವೇ ಬಾಸ್! ಟೆಸ್ಟ್​​ನಲ್ಲಿ 2ನೇ ಸ್ಥಾನಕ್ಕೆ ಕುಸಿತ: ಐಸಿಸಿ ವಾರ್ಷಿಕ ರ‍್ಯಾಂಕಿಂಗ್​ ಬಿಡುಗಡೆ - ICC Rankings

Last Updated : May 4, 2024, 7:22 AM IST

ABOUT THE AUTHOR

...view details