ಅಹಮದಾಬಾದ್:ಫೈನಲ್ ಟಿಕೆಟ್ಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾಕೋ ಎಡವಿದಂತಿದೆ. ಅತಿಯಾದ ಆತ್ಮವಿಶ್ವಾಸ ಮತ್ತು ಕೆಕೆಆರ್ ಅದ್ಭುತ ಆಟದಿಂದಾಗಿ ಪ್ಯಾಟ್ ಕಮಿನ್ಸ್ ಪಡೆ 20 ಓವರ್ಗಳಲ್ಲಿ 159 ರನ್ಗೆ ಆಲೌಟ್ ಆಗಿದೆ. ಆರಂಭದಲ್ಲೇ ಸನ್ ಪಡೆಯನ್ನು ಮಿಚೆಲ್ ಸ್ಟಾರ್ಕ್ ಮಾರಕ ದಾಳಿ ನಡೆಸಿ ಕಟ್ಟಿಹಾಕಿದರು.
ಹೈದರಾಬಾದ್ ತಂಡದ ಬ್ಯಾಟಿಂಗ್ ಆಧಾರವಾಗಿದ್ದ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಬೇಗನೆ ವಿಕೆಟ್ ನೀಡಿದರು. ಅದರಲ್ಲೂ ಹೆಡ್ ಇನಿಂಗ್ಸ್ನ ಎರಡನೇ ಎಸೆತದಲ್ಲೇ ಕ್ಲೀನ್ಬೌಲ್ಡ್ ಆಗಿ ಭಾರೀ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ 3 ರನ್ ಗಳಿಸಿದ್ದಾಗ ಬಲವಾದ ಹೊಡೆತಕ್ಕೆ ಕೈಹಾಕಿ ಸುಟ್ಟುಕೊಂಡರು. ಇದರಿಂದ ತಂಡ 13 ರನ್ಗೆ ಇಬ್ಬರು ಡ್ಯಾಶಿಂಗ್ ಆರಂಭಿಕರನ್ನು ಕಳೆದುಕೊಂಡಿತು.
ಯುವ ಆಲ್ರೌಂಡರ್ ನಿತೀಶ್ಕುಮಾರ್ ರೆಡ್ಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ 9, ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದ ಶಹಬಾಜ್ ಅಹ್ಮದ್ ಸೊನ್ನೆಗೆ ವಿಕೆಟ್ ನೀಡಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. 39 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಹೈದರಾಬಾದ್ ರನ್ ಬರ ಎದುರಿಸಿತು.
ರಾಹುಲ್ ತ್ರಿಪಾಠಿ ಕ್ಲಾಸಿಕ್ ಬ್ಯಾಟಿಂಗ್:ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಾಹುಲ್ ತ್ರಿಪಾಠಿ ಅರ್ಧಶತಕ ಬಾರಿಸಿ ಆಧರಿಸಿದರು. ಪಂದ್ಯದ ಮಹತ್ವ ಅರಿತಂತೆ ಆಡಿದ ಬಲಗೈ ಆಟಗಾರ 35 ಎಸೆತಗಳಲ್ಲಿ 55 ರನ್ ಮಾಡಿದರು. ಇವರಿಗೆ ಹೆನ್ರಿಚ್ ಕ್ಲಾಸಿನ್ ಉತ್ತಮ ಸಾಥ್ ನೀಡಿದರು. 21 ಎಸೆತಗಳಲ್ಲಿ 32 ರನ್ ಗಳಿಸಿದರು. ಕ್ಲಾಸಿನ್ ಔಟಾದ ಬಳಿಕ ಅಬ್ದುಲ್ ಸಮದ್ 16 ರನ್ಗೆ ವಿಕೆಟ್ ನೀಡಿದರು. ಇದರಿಂದ ತಂಡ ಮತ್ತೆ ಕುಸಿಯಲಾರಂಭಿಸಿತು.
ಈ ವೇಳೆ ಬ್ಯಾಟಿಂಗ್ ಹೊಣೆ ಹೊತ್ತ ನಾಯಕ ಪ್ಯಾಟ್ ಕಮಿನ್ಸ್ 24 ಎಸೆತಗಳಲ್ಲಿ 30 ರನ್ ಬಾರಿಸಿದರು. ಇದರಿಂದ ತಂಡ 150 ರ ಗಡಿ ದಾಟಿತು. ಕೊನೆಯಲ್ಲಿ 19.3 ಓವರ್ಗಳಲ್ಲಿ 159 ರನ್ ಗಳಿಸಿ ಗಂಟುಮೂಟೆ ಕಟ್ಟಿತು. ಫೈನಲ್ ಟಿಕೆಟ್ ಪಡೆಯಲು ಕೋಲ್ಕತ್ತಾ ನೈಟ್ ರೈಡರ್ಸ್ 160 ರನ್ ಗಳಿಸಿದರೆ ಸಾಕು.