ಕೋಲ್ಕತ್ತಾ:ಹೊಡಿಬಡಿ ಆಟವಾದ ಟಿ20, ಕ್ರಿಕೆಟ್ ಸ್ವರೂಪವನ್ನೇ ಬದಲಿಸಿದೆ. ಅದರಲ್ಲೂ, ಐಪಿಎಲ್ನಲ್ಲಿ ದಿನಕ್ಕೊಂದು ದಾಖಲೆಗಳು ಸೃಷ್ಟಿಯಾಗುತ್ತಿವೆ. 287 ರನ್ ಸಿಡಿಸುವ ಮೂಲಕ ಅತಿ ಹೆಚ್ಚು ರನ್ ಪೇರಿಸಿದ ಸನ್ರೈಸರ್ಸ್ ಹೈದರಾಬಾದ್ ದಾಖಲೆ ಬರೆದಿತ್ತು. ಈಗ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದು ವಿಶ್ವದಾಖಲೆ ಸೃಷ್ಟಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಪಂಜಾಬ್ ಕಿಂಗ್ಸ್ ಟಿ-20 ಕ್ರಿಕೆಟ್ನ ಅಪ್ಪಟ ಸೊಬಗನ್ನು ಪರಿಚಯಿಸಿತು. ಟೂರ್ನಿಯಲ್ಲಿ ಭರ್ಜರಿ ಲಯದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚೆಂಡಾಡಿತು. ಕೆಕೆಆರ್ ನೀಡಿದ್ದ ಬೆಟ್ಟದಂತಹ 261 ರನ್ ಗುರಿಯನ್ನು ಇನ್ನೂ 8 ಬಾಲ್ಗಳು(18.4) ಉಳಿದಿರುವಂತೆಯೇ ಗುರಿ ಮುಟ್ಟಿ ಇತಿಹಾಸ ಬರೆಯಿತು.
ಬ್ಯಾಟಿಂಗೇ ಎಲ್ಲ, ಬೌಲಿಂಗ್ ಲೆಕ್ಕಕ್ಕಿಲ್ಲ:ಈ ಋತುವಿನ ಐಪಿಎಲ್ನಲ್ಲಿ ನಿಜಕ್ಕೂ ಬೌಲರ್ಗಳ ಬಗ್ಗೆ ಅನುಕಂಪ ಮೂಡುತ್ತದೆ. ಪ್ರತಿ ಪಂದ್ಯದಲ್ಲೂ ಯಾವುದೇ ತಂಡದ ಬೌಲರ್ ದಂಡನೆಗೆ ಗುರಿಯಾಗುತ್ತಿದ್ದಾನೆ. ಅದೆಷ್ಟೇ ಚಾಕಚಕತ್ಯೆಯಿಂದ ಬೌಲಿಂಗ್ ಮಾಡಿದರೂ, ಬ್ಯಾಟಿಂಗ್ ಪರಾಕ್ರಮದ ಮುಂದೆ ಸೆಡ್ಡು ಹೊಡೆಯಲಾಗುತ್ತಿಲ್ಲ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ಗೆ ಫಿಲಿಪ್ ಸಾಲ್ಟ್, ಸುನಿಲ್ ನರೈನ್ ಮತ್ತೊಮ್ಮೆ ದೈತ್ಯ ಇನಿಂಗ್ಸ್ ಕಟ್ಟಿ ನೆರವಾದರು. ಸಾಲ್ಟ್ 37 ಎಸೆತಗಳಲ್ಲಿ 75 ರನ್ ಸಿಡಿಸಿದರು. ತಾನು ಬ್ಯಾಟರ್ರೋ, ಬೌಲರ್ರೋ ಎಂಬುದನ್ನೇ ಮರೆತಿರುವ ನರೈನ್ ಪಂಜಾಬ್ ಬೌಲರ್ಗಳನ್ನು ಚಚ್ಚಿ 32 ಎಸೆತಗಳಲ್ಲಿ 71 ರನ್ ಸಿಡಿಸಿದರು. ಮೊದಲ ವಿಕೆಟ್ಗೆ ಇಬ್ಬರೂ ಸೇರಿ 10 ಓವರ್ಗಳಲ್ಲಿ 138 ರನ್ ಗಳಿಸಿದರು. ಇದರ ಬಳಿಕ ಬಂದ ವೆಂಕಟೇಶ್ ಅಯ್ಯರ್ 39, ಆಂಡ್ರೆ ರಸೆಲ್ 24, ನಾಯಕ ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ಇದರಿಂದ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 261 ರನ್ ಪೇರಿಸಿತು.