ಬೆಂಗಳೂರು: ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ಎರಡು ವರ್ಷದ ಹಿಂದೆ ನೀಡಿದ್ದ ದೂರಿನ ಜೊತೆ ರಾಜಾರೋಷವಾಗಿ ವಾಹನದಲ್ಲಿ ಓಡಾಡುತ್ತಿರುವ ಬಗ್ಗೆ ಫೋಟೋ ಸಮೇತ ಮಾಹಿತಿ ನೀಡಿದರೂ ಖದೀಮನನ್ನ ಬಂಧಿಸಲು ಡಿ.ಜೆ. ಹಳ್ಳಿ ಪೊಲೀಸರು ಮೀನಾಮೇಷ ಎಣಿಸುತ್ತಿರುವ ಆರೋಪ ಕೇಳಿಬಂದಿದೆ.
ಕಳ್ಳತನವಾದ ದ್ವಿಚಕ್ರವಾಹನ ನಗರದೆಲ್ಲೆಡೆ ಓಡಾಡಿ ಸಂಚಾರ ನಿಯಮ ಉಲ್ಲಂಘಿದ್ದು, ಇದರ ಪರಿಣಾಮ ವಾಹನದ ಮಾಲೀಕರಿಗೆ ದಂಡದ ನೋಟಿಸ್ ಬರುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕಳ್ಳ ಮತ್ತು ವಾಹನವನ್ನು ಪತ್ತೆಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದ್ವಿಚಕ್ರವಾಹನವನ್ನು ಖದೀಮ ಬೇರೆಯವರಿಗೆ ಮಾರಾಟ ಮಾಡಿರುವ ಶಂಕೆಯಿದ್ದು, ನಿಯಮ ಉಲ್ಲಂಘಿಸಿದ ವಾಹನದಲ್ಲಿ ಎಲ್ಲಾ ವರ್ಗದ ವಯೋಮಾನದವರು ಓಡಾಡುತ್ತಿದ್ದಾರೆ. ಅಲ್ಲದೆ, ಬರೋಬ್ಬರಿ 18 ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಸಂಬಂಧ 9 ಸಾವಿರ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ಬಂದಿರುವುದು ಬೈಕ್ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
@DCPTrNorthBCP @Jointcptraffic @DCPTrEastBCP @DCPTrSouth @DCPSouthTrBCP
— Mohammed (@misbah1307) January 20, 2025
Even after various complaints and visits to police stations post theft of my vehicle (Scooter Acces 125), which is running in bangalore freely from past 2 years, no information or retrival. PFA info.
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದಿದ್ದ ಕಳ್ಳ; ಮೊಹಮ್ಮದ್ ಮೀಸ್ಬಾದ್ದಿನ್ ದ್ವಿಚಕ್ರ ವಾಹನ ಕಳೆದುಕೊಂಡ ಮಾಲೀಕರಾಗಿದ್ದು, ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಲ್ ಬೈರಸಂದ್ರದಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್, 2021ರ ಡಿಸೆಂಬರ್ ನಲ್ಲಿ ಸುಜುಕಿ ಆ್ಯಕ್ಸಿಸ್ ವಾಹನ ಖರೀದಿಸಿದ್ದರು. ಇದಾದ 11 ತಿಂಗಳಲ್ಲಿ ಅಂದರೆ 2022ರ ಅಕ್ಟೋಬರ್ ರಂದು ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನ ಕಳ್ಳತನವಾಗಿತ್ತು. ಈ ಸಂಬಂಧ ಡಿ. ಜೆ. ಹಳ್ಳಿ ಪೊಲೀಸರಿಗೆ ಮೊಹಮ್ಮದ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರೂ ದ್ವಿಚಕ್ರವಾಹನ ಪತ್ತೆಯಾಗದಿದ್ದರಿಂದ ಸುಮ್ಮನಾಗಿದ್ದರು.
ಕಳ್ಳತನವಾದ ಆರು ತಿಂಗಳ ಬಳಿಕ ದೂರುದಾರರ ಮೊಬೈಲ್ ಗೆ ಟ್ರಾಫಿಕ್ ಪೊಲೀಸರು ಕಳುಹಿಸಿದ್ದ ಸಂದೇಶದಲ್ಲಿ ಕೆಎ51 ಎಚ್ಎಸ್ 2889 ಸಂಖ್ಯೆಯ ವಾಹನದ ಹಿಂಬದಿ ಸವಾರರು ಹೆಲ್ಮೆಟ್ ಧರಿಸದ ಕಾರಣ 500 ರೂಪಾಯಿ ಪಾವತಿಸುವಂತೆ ತಿಳಿಸಿದ್ದರು. ಇದಾದ ಎರಡು ವರ್ಷಗಳಲ್ಲಿ 18 ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಒಟ್ಟು 9 ಸಾವಿರ ಪಾವತಿಸುವಂತೆ ಹೇಳಿದ್ದರು. ಹಾಗಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದ್ವಿಚಕ್ರವಾಹನ ಸಮೇತ ಮೊಹಮ್ಮದ್ ಮಾಹಿತಿ ನೀಡಿದ್ದರು. ಈ ಬಗ್ಗೆ ಪರಿಶೀಲಿಸಿ ವಾಹನ ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದರು. ನಗರದಲ್ಲೇ ವಾಹನ ಸಂಚರಿಸುತ್ತಿದ್ದರೂ ಈವರೆಗೆ ತಮ್ಮ ವಾಹನ ಪತ್ತೆ ಹಚ್ಚಿಲ್ಲ ಎಂದು ಮೊಹಮ್ಮದ್ ದೂರಿದ್ದಾರೆ.
Just another fine again today pic.twitter.com/6DB91D5Evw
— Mohammed (@misbah1307) January 21, 2025
''ದ್ವಿಚಕ್ರ ವಾಹನ ಕಳ್ಳತನ ಬಗ್ಗೆ ಡಿ.ಜೆ. ಹಳ್ಳಿ ಪೊಲೀಸರಿಗೆ ದೂರು ನೀಡಿದ್ದೇನೆ. ತಮ್ಮ ವಾಹನವನ್ನ ಅಪರಿಚಿತರು ಓಡಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿಯಮ ಉಲ್ಲಂಘಿಸಿದ ವ್ಯಾಪ್ತಿಗೆ ಬರುವ ಕಲಾಸಿಪಾಳ್ಯ ಹಾಗೂ ವಿಲ್ಸನ್ ಗಾರ್ಡನ್ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಉಪಯೋಗವಾಗಿಲ್ಲ'' ಎಂದು ಈಟಿವಿ ಭಾರತ ಎದುರು ಟೆಕ್ಕಿ ಮೊಹಮ್ಮದ್ ಆಳಲು ತೋಡಿಕೊಂಡಿದ್ದಾರೆ.
''ದ್ವಿಚಕ್ರವಾಹನ ಕಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದು, ಕದ್ದ ವಾಹನದ ಮೂಲಕ ಟ್ರಾಫಿಕ್ ವೈಯಲೇಷನ್ ಆಗಿದೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಆದಷ್ಟು ಬೇಗ ದ್ವಿಚಕ್ರವಾಹನ ಪತ್ತೆ ಹಚ್ಚಿ ಖದೀಮನನ್ನು ಬಂಧಿಸಲಾಗುವುದು'' ಎಂದು ಡಿ.ಜೆ.ಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ : ಹಣ ಕಳೆದುಕೊಂಡವರಿಂದ ಮಹಿಳೆ ಮನೆ ಮುಂದೆ ಪ್ರತಿಭಟನೆ