ರಾಜ್ಕೋಟ್:ಫೆಬ್ರವರಿ 15ರಿಂದ ರಾಜ್ಕೋಟ್ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ಗೂ ಮುನ್ನವೇ ಭಾರತ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊದಲ ಟೆಸ್ಟ್ನಲ್ಲಿ ಬಲ ತೊಡೆಯ ನೋವಿಗೆ ತುತ್ತಾಗಿದ್ದ ಕೆ.ಎಲ್.ರಾಹುಲ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮೂರನೇ ಟೆಸ್ಟ್ನಿಂದಲೂ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್, ನಾಲ್ಕನೇ ದಿನದಾಟದಂದು ಬಲ ತೊಡೆಯ ನೋವಿಗೊಳಗಾಗಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್ನಿಂದಲೂ ಹೊರಗುಳಿದಿದ್ದರು. ಇತ್ತೀಚೆಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ವಿರುದ್ಧದ ಉಳಿದ 3 ಟೆಸ್ಟ್ ಪಂದ್ಯಗಳಿಗೆ 17 ಸದಸ್ಯರ ತಂಡ ಪ್ರಕಟಿಸಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮೊದಲೆರಡು ಟೆಸ್ಟ್ನಿಂದ ಹೊರಗಿದ್ದ ವಿರಾಟ್ ಕೊಹ್ಲಿ, ಉಳಿದ ಮೂರು ಪಂದ್ಯಗಳಲ್ಲೂ ಕಣಕ್ಕಿಳಿಯುತ್ತಿಲ್ಲ ಎಂದು ತಿಳಿಸಿರುವ ಬಿಸಿಸಿಐ ತಂಡದಿಂದ ಅವರ ಹೆಸರು ಕೈಬಿಟ್ಟಿತ್ತು.
ದೇವದತ್ ಪಡಿಕ್ಕಲ್ಗೆ ಅವಕಾಶ: ಅಲ್ಲದೇ ರಾಹುಲ್ ಮತ್ತು ರವೀಂದ್ರ ಜಡೇಜಾ 3ನೇ ಪಂದ್ಯಕ್ಕೆ ಮರಳುವರು ಎಂದೂ ತಿಳಿಸಿತ್ತು. ಇದೀಗ ರಾಹುಲ್ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಪಂದ್ಯದಿಂದ ಹೊರಗುಳಿಯಲಿದ್ದು ತಂಡಕ್ಕೆ ಮತ್ತೊಂದು ಆಘಾತವಾಗಿದೆ. ರಾಹುಲ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.