ಹೈದರಾಬಾದ್: ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ತೊರೆದು ಮುಂದಿನ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗೆ ಸೇರುತ್ತಾರೆ ಎಂಬ ವದಂತಿಗಳು ಸಮಾಜಿಕ ಜಾಲತಾಣಗಳಲ್ಲಿ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದೆ. ಈ ವಿಷಯ ರಾಹುಲ್ ಗಮನಕ್ಕೂ ಬಂದಿದ್ದೂ ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಅಭಿಮಾನಿಯೊಬ್ಬರು ರಾಹುಲ್ರೊಂದಿಗೆ ಮಾತನಾಡಿರುವ ವಿಡಿಯೋವೊಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆರ್‌ಸಿಬಿ ಅಭಿಮಾನಿಯೊಬ್ಬ ರಾಹುಲ್ ಜೊತೆ ಮಾತನಾಡುತ್ತ, ಮುಂದಿನ ಸೀಸನ್ನಲ್ಲಿ ಆರ್‌ಸಿಬಿ ಪರ ಆಡುತ್ತಿರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ರಾಹುಲ್ ಕೂಡ ನಗುತ್ತಲೇ ಉತ್ತರಿಸಿದ್ದಾರೆ. ಮೊದಲಿಗೆ ಆ ಯುವಕ 'ನಾನು ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿಯಾಗಿದ್ದೇನೆ. ಬಹಳ ದಿನಗಳಿಂದ ಆರ್‌ಸಿಬಿಯನ್ನು ಅನುಸರಿಸುತ್ತಿದ್ದೇನೆ. ಈ ಹಿಂದೆ ನೀವೂ ಆರ್‌ಸಿಬಿ ಪರ ಆಡಿದ್ದೀರಿ. ಈಗ ವೈರಲ್ ಆಗುತ್ತಿರುವ ವದಂತಿಗಳ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಆದರೆ, ನೀವು ಆರ್‌ಸಿಬಿ ಪರ ಆಡಲು ಬಯಸುತ್ತಿರಾ ಎಂದು ಬೆಂಗಳೂರಿನ ಅಭಿಮಾನಿ ರಾಹುಲ್‌ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ರಾಹುಲ್ ಕೂಡ ‘ಆಶಿಸೋಣ’ ಎಂದು ಉತ್ತರಿಸಿದ್ದಾರೆ. ಇದೀಗ ಈ ವಿಡಿಯೋ ಆರ್‌ಸಿಬಿ ಅಭಿಮಾನಿಗಳಿಂದ ವೈರಲ್ ಆಗಿದೆ. 'ರಾಹುಲ್‌ಗೆ ಆರ್‌ಸಿಬಿ ಫ್ರಾಂಚೈಸಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ' ಮತ್ತು 'ರಾಹುಲ್ ದಯವಿಟ್ಟು ಆರ್‌ಸಿಬಿಗೆ ಬನ್ನಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.