ಹೈದರಾಬಾದ್: ಈ ತಿಂಗಳು 22ನೇ ತಾರೀಖಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ-20 ಪಂದ್ಯಗಳು ನಡೆಯಲಿವೆ. ಭಾರತ ಪ್ರವಾಸಕ್ಕೆ ಆಗಮಿಸುತ್ತಿರುವ ಇಂಗ್ಲೆಂಡ್ 5 ಟಿ-20 ಮತ್ತು 3 ಏಕದಿನ ಪಂದ್ಯ ಆಡಲಿದೆ. ಈಗಾಗಲೇ ಟಿ-20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಏಕದಿನ ಸರಣಿಗೆ ತಂಡ ಪ್ರಕಟ ಮಾಡುವುದು ಬಾಕಿ ಇದೆ. ಏತನ್ಮಧ್ಯೆ ಕನ್ನಡಿಗನಿಗೆ ಶುಭ ಸುದ್ದಿಯೊಂದು ಕಾದಿದೆ.
ಹೌದು, ಮುಂದಿನ ತಿಂಗಳು ಅಂದರೆ ಫೆಬ್ರವರಿ 6 ರಿಂದ ಇಂಗ್ಲೆಂಡ್ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಕೆಲವೇ ದಿನಗಳಲ್ಲಿ ಬಿಸಿಸಿಐ ಏಕದಿನ ತಂಡ ಪ್ರಕಟಿಸಲಿದೆ. ಈ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗಳಲ್ಲಿ ಕನ್ನಡಿಗ ಬ್ಯಾಟರ್ ಸಖತ್ ಸೌಂಡ್ ಮಾಡುತ್ತಿದ್ದಾರೆ. ವಿದರ್ಭ ತಂಡದ ಪರ ಆಡುತ್ತಿರುವ ಕರುಣ್ ನಾಯರ್ ಉತ್ತಮ ಫಾರ್ಮ್ನಲ್ಲಿದ್ದು, ಶತಕಗಳ ಮೇಲೆ ಶತಕ ಸಿಡಿಸಿ ಬಿಸಿಸಿಐನ ಗಮನ ಸೆಳೆದಿದ್ದಾರೆ.
ಜಮ್ಮು ಕಾಶ್ಮೀರ ವಿರುದ್ಧ ಮೊದಲ ಪಂದ್ಯದೊಂದಿಗೆ ಶತಕದ ಭೇಟಿ ಆರಂಭಿಸಿದ ನಾಯರ್ ರಾಜಸ್ತಾನ ವಿರುದ್ಧದ 7ನೇ ಪಂದ್ಯದ ವರೆಗೂ ಮುಂದುವರೆಸಿದ್ದಾರೆ. 6 ಪಂದ್ಯಗಳಲ್ಲಿ ಅಜೇಯವಾಗಿ 5 ಶತಕ ಸಿಡಿಸಿ 664ರ ಸರಾಸರಿಯಲ್ಲಿ 664 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ತಮ್ಮ ಸಾಮರ್ಥ್ಯವನ್ನು ಬಿಸಿಸಿಐಗೆ ತೋರಿಸಿದ್ದಾರೆ. ಅವರ ಈ ಸಾಲಿಡ್ ಬ್ಯಾಟಿಂಗ್ಗೆ ಇದೀಗ ದೊಡ್ಡ ಆಫರ್ ಸಿಗುವ ಸಾಧ್ಯತೆ ಇದೆ. ಇಂಗ್ಲೆಂಡ್ ವಿರುದ್ಧದ ಏಕದಿನ ತಂಡದಲ್ಲಿ ನಾಯರ್ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ, ತಂಡದಲ್ಲಿ ಸ್ಥಾನ ಸಿಕ್ಕು ಉತ್ತಮ ಪರ್ಫಾಮೆನ್ಸ್ ತೋರಿದರೇ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆಯಾದರೆ ಅಚ್ಚರಿ ಪಡಬೇಕಿಲ್ಲ.