ಹೈದರಾಬಾದ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಜೇಮ್ಸ್ ವಿನ್ಸ್ ದೇಶ ತೊರೆದು ದುಬೈಗೆ ಸೇರಿಕೊಂಡಿದ್ದಾರೆ. ಅವರ ಮನೆ ಮೇಲೆ ನಿರಂತರ ದಾಳಿಯಿಂದಾಗಿ ಕಂಗೆಟ್ಟಿರುವ ವಿನ್ಸ್ ಕುಟುಂಬ ಸಮೇತವಾಗಿ ದೇಶ ತೊರೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 13,000ಕ್ಕೂ ಹೆಚ್ಚು ರನ್ ಗಳಿಸಿದ ವಿನ್ಸ್, T20 ಕ್ರಿಕೆಟ್ ಮೂಲಕವೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ.
ವಿನ್ಸ್ ಟೆಲಿಗ್ರಾಫ್ಗೆ ನೀಡಿದ ಸಂದರ್ಶನದಲ್ಲಿ ಕಳೆದ 8 ವರ್ಷಗಳಿಂದ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿರುವ ಹ್ಯಾಂಪ್‌ಶೈರ್ ಅನ್ನು ತೊರೆಯುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. 8 ವರ್ಷಗಳಿಂದ ಹೆಂಡತಿ ಮತ್ತು ಮಕ್ಕಳೊಂದಿಗೆ ಹ್ಯಾಂಪ್ಶೇರ್ನಲ್ಲಿ ವಾಸಿಸುತ್ತಿದ್ದೆ. ಆದರೆ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ತಮ್ಮ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಇಡೀ ಕುಟುಂಬವು ಮನೆಯೊಳಗೆ ಇದ್ದಾಗ ಮನೆಯ ಕಿಟಕಿಗಳನ್ನು ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿನ ವಸ್ತುಗಳನ್ನು ಹಾನಿಗೊಳಿಸಿದ್ದರು. ಆದರೆ, ಇದರಲ್ಲಿ ಯಾರಿಗೂ ದೈಹಿಕವಾಗಿ ಹಾನಿಯಾಗಿರಲಿಲ್ಲ.
ಈ ಘಟನೆ ಬೆನ್ನಲ್ಲೆ ಕುಟುಂಬ ಸಮೇತವಾಗಿ ಒಂದು ವಾರದ ಕಾಲ ಬೇರೊಂದು ಸ್ಥಳಕ್ಕೆ ತೆರಳಿದ್ದೆವು. ಬಳಿಕ ಮನೆಗೆ ಹಿಂತಿರುಗಿದ್ದೆವು. ಮನೆಗೆ ಆಗಮಿಸುತ್ತಿದ್ದಂತೆ ಮತ್ತೊಮ್ಮೆ ದುಷ್ಕರ್ಮಿಗಳು ಮನೆಯ ಮೇಲೆ ದಾಳಿ ನಡೆಸಿದ್ದರು. ಇದರಿಂದ ಇಡೀ ಕುಟುಂಬಸ್ಥರು ಭಯಬೀತರಾಗಿದ್ದರು. ಇದೇ ಕಾರಣಕ್ಕಾಗಿ ತಾವು ಮನೆಯ ಸದಸ್ಯರೊಂದಿಗೆ ದೇಶ ತೊರೆದು ದುಬೈಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಜೆಮ್ಸ್ ವಿನ್ಸ್ ಪ್ರತಿನಿಧಿಸುತ್ತಿರುವ ಹ್ಯಾಂಪ್‌ಶೈರ್ ತಂಡ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 2024ರಲ್ಲಿ ವಿನ್ಸ್ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮನೆ ಮೇಲೆ ನಿರಂತರ ದಾಳಿಗಳಾಗಿವೆ. ಇದೇ ಕಾರಣಕ್ಕೆ ಅವರು ದೇಶ ತೊರೆದಿದ್ದಾರೆ ಎಂದು ತಿಳಿಸಿದೆ.
ಸದ್ಯ ವಿನ್ಸ್ ಅಬುಧಾಬಿ ಟಿ-10 ಲೀಗ್‌ನಲ್ಲಿ ಡೆಲ್ಲಿ ಬುಲ್ಸ್ ತಂಡದ ಭಾಗವಾಗಿದ್ದಾರೆ. 2024ರಲ್ಲಿ ಡೆಲ್ಲಿ ತಂಡ ಕ್ವಾರ್ಟರ್ ಫೈನಲ್ ತಲುಪಿತ್ತು. ವಿನ್ಸ್ ಈ ಋತುವಿನಲ್ಲಿ 10 ಪಂದ್ಯಗಳಲ್ಲಿ 214 ರನ್ ಕಲೆಹಾಕಿದ್ದರು. ಇದನ್ನು ಹೊರತು ಪಡಿಸಿ ಇಂಗ್ಲೆಂಡ್ ಪರ 13 ಟೆಸ್ಟ್, 25 ODI ಮತ್ತು 17 T20 ಪಂದ್ಯಗಳನ್ನು ಆಡಿದ್ದಾರೆ. ವಿನ್ಸ್ 17 ಟಿ20 ಪಂದ್ಯಗಳಲ್ಲಿ 463 ರನ್ ಗಳಿಸಿದ್ದಾರೆ. ಇಂಟರ್ನ್ಯಾಷನಲ್ ಲೀಗ್ T20 (ILT20)ನಲ್ಲೂ ಆಡುತ್ತಿದ್ದಾರೆ.
ಇದನ್ನೂ ಓದಿ: RCB ತಂಡದಿಂದ ಹೊರಬಿದ್ದ ಆಲ್ರೌಂಡರ್: ಬದಲಿ ಪ್ಲೇಯರ್ ಆಗಿ ಇಂಗ್ಲೆಂಡ್ ಸ್ಟಾರ್ ಎಂಟ್ರಿ!