ಹೈದರಾಬಾದ್:ವಿಜಯ್ ಹಜಾರೆ ಟ್ರೋಫಿಯಲ್ಲಿಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡ ವಿರುದ್ಧ ಕರ್ನಾಟಕ ತಂಡ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿದೆ.
ವಡೋದರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತು. ತಂಡದ ಪರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಬೆನ್ನಲ್ಲೆ ಭಾರತಕ್ಕೆ ಮರಳಿದ ಪಡಿಕ್ಕಲ್ ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದರು. ಬರೋಡಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ, ಕೇವಲ 99 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 102 ರನ್ ಚಚ್ಚಿದರು.
ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ ಔಟಾದ ಬೆನ್ನಲ್ಲೆ ಕರ್ನಾಟಕ ತಂಡ ಒತ್ತಡಕ್ಕೆ ಸಿಲುಕಿತ್ತು, ಆದರೆ ಪಡಿಕ್ಕಲ್ ಮತ್ತು ಅನಿಶ್ ಕೆವಿ ಜೋಡಿ 133 ರನ್ಗಳ ಜೊತೆಯಾಟ ನಡೆಸಿ ತಂಡದ ಸ್ಕೋರ್ಗೆ ಕೊಡುಗೆ ನೀಡಿದರು. ಅನೀಶ್ ಕೆವಿ 52 ರನ್ ಗಳಿಸಿ ಔಟಾದ ನಂತರ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಿ ಶತಕ ಸಿಡಿಸಿದರು.