ಹೈದರಾಬಾದ್:ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ತೋರುತ್ತಿದೆ. 36 ವರ್ಷಗಳ ನಂತರ, ಕಿವೀಸ್ ಪಡೆ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವಿನ ರುಚಿ ಕಂಡಿದೆ. ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯಗಳನ್ನು ಗೆದ್ದ ಕಿವೀಸ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಗೆದ್ದುಕೊಂಡಿತು. ಇದೀಗ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನವೆಂಬರ್ 1ರಿಂದ (ಶುಕ್ರವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ಆದರೆ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ಗೆ ದೊಡ್ಡ ಆಘಾತ ಎದುರಾಗಿದೆ. ಕಿವೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಅಂತಿಮ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ತೊಡೆಸಂದು ಗಾಯದಿಂದಾಗಿ ಕೇನ್, ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.
ಇತ್ತೀಚೆಗೆ ಶ್ರೀಲಂಕಾದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೇನ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ನ್ಯೂಜಿಲೆಂಡ್ನ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದಿದ್ದರು. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ 3ನೇ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ಮ್ಯಾನೆಜ್ಮೆಂಟ್ ತಿಳಿಸಿದೆ.