ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿಂದು ಡಬಲ್​ ಧಮಾಕಾ: ಪ್ಲೇಆಫ್​ನಲ್ಲಿ ಉಳಿಯೋಕೆ ಆರ್​ಸಿಬಿ, ಡೆಲ್ಲಿ, ಚೆನ್ನೈ ಹೋರಾಟ - IPL Super Sunday - IPL SUPER SUNDAY

ಐಪಿಎಲ್ ಸೂಪರ್​ ಸಂಡೆಯಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿವೆ. ಪ್ಲೇಆಫ್​ ಹಂತಕ್ಕೇರುವ ತಂಡಗಳನ್ನು ನಿರ್ಧರಿಸುವ ಮಹತ್ವದ ಪಂದ್ಯಗಳು ಇವಾಗಿವೆ.

ಐಪಿಎಲ್​ನಲ್ಲಿಂದು ಡಬಲ್​ ಧಮಾಕಾ
ಐಪಿಎಲ್​ನಲ್ಲಿಂದು ಡಬಲ್​ ಧಮಾಕಾ (File Photo (ETV Bharat))

By ETV Bharat Karnataka Team

Published : May 12, 2024, 11:37 AM IST

ಹೈದರಾಬಾದ್​:ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)​ ಹಂಗಾಮದಲ್ಲಿ ಇಂದು ಸಂಡೇ ಡಬಲ್​ ಧಮಾಕಾ. ಮಧ್ಯಾಹ್ನ ಮತ್ತು ಸಂಜೆ 2 ಪಂದ್ಯ ನಡೆಯಲಿವೆ. ಮೊದಲ ಹಣಾಹಣಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ಎದುರಾದರೆ, ಎರಡನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಪ್ಲೇ ಆಫ್​ ಕದನ ನಡೆಯಲಿದೆ.

ಆರ್​ಸಿಬಿಗಾಗಿ ಚೆನ್ನೈ ಸೋಲುತ್ತಾ?:ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯುವ ಸಿಎಸ್​ಕೆ ಮತ್ತು ಆರ್​ಆರ್​ ಎದುರಿನ ಪಂದ್ಯ ಆರ್​ಸಿಬಿಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಒಂದು ವೇಳೆ ಋತುರಾಜ್​ ಗಾಯಕ್ವಾಡ್​ ತಂಡ ಗೆಲುವು ಸಾಧಿಸಿದಲ್ಲಿ ಪ್ಲೇಆಫ್​ಗೆ ಬಲವಾದ ಪೈಪೋಟಿ ನೀಡಲಿದೆ. ರಾಜಸ್ಥಾನ ಗೆದ್ದಲ್ಲಿ ಸಿಎಸ್​ಕೆಗೆ ಆರ್​ಸಿಬಿ ವಿರುದ್ಧದ ಕೊನೆಯ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

ಇತ್ತ ರಾಜಸ್ಥಾನ ಪ್ಲೇಆಫ್​ನಲ್ಲಿ ಸ್ಥಾನ ಅಧಿಕೃತ ಮಾಡಿಕೊಳ್ಳಲು ಒಂದು ಪಂದ್ಯ ಗೆದ್ದರೂ ಸಾಕು. ತಂಡ ಲೀಗ್​ ಹಂತದಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಲಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ ಗೆಲ್ಲಲಿ ಎಂಬುದು ಆ ತಂಡದ ಅಭಿಮಾನಿಗಳಿಗಿಂತ ಆರ್​ಸಿಬಿ ಫ್ಯಾನ್ಸ್​ ಹೆಬ್ಬಯಕೆ.

ಸಿಎಸ್​ಕೆ ಆಡಿರುವ 12 ಪಂದ್ಯಗಳಲ್ಲಿ ತಲಾ 6ರಲ್ಲಿ ಸೋಲು, ಗೆಲುವು ಕಂಡು 12 ಪಾಯಿಂಟ್ಸ್​ ಗಳಿಸಿದೆ. ಇನ್ನೆರಡು ಪಂದ್ಯಗಳಲ್ಲಿ ಇಂದಿನ ರಾಯಲ್ಸ್​ ಎದುರು ಮತ್ತು ಆರ್​ಸಿಬಿ ವಿರುದ್ಧವೇ ಮೇ 18ರಂದು ಕೊನೆಯ ಲೀಗ್​ ಪಂದ್ಯ ಆಡಲಿದೆ. ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ 11 ಪಂದ್ಯದಲ್ಲಿ 8 ಗೆಲುವು, 3ರಲ್ಲಿ ಸೋತು 16 ಅಂಕ ಹೊಂದಿದೆ. ಪ್ಲೇಆಫ್​ಗಾಗಿ ಇನ್ನೊಂದು ಹೆಜ್ಜೆ ದೂರವಿದೆ.

ಮಾಡು ಇಲ್ಲವೇ ಮಡಿ ಫೈಟ್​:2ನೇ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್​ಸಿಬಿ ಎದುರಾಗಲಿದ್ದು, ಇತ್ತಂಡಗಳಿಗೂ ಗೆಲುವು ಅನಿವಾರ್ಯ. ಪ್ಲೇಆಫ್​ಗಾಗಿ ರೇಸ್​ನಲ್ಲಿರುವ ತಂಡಗಳ ಪೈಕಿ ಎರಡೂ ಪೈಪೋಟಿಯಲ್ಲಿವೆ. ಡೆಲ್ಲಿ 12ರಲ್ಲಿ ತಲಾ 6 ಗೆಲುವು ಸೋಲು ಕಂಡಿದೆ. ರನ್​ರೇಟ್​ನಲ್ಲಿ -0.316 ಹೊಂದಿದ್ದು, ಆರ್​ಸಿಬಿ ವಿರುದ್ಧ ಗೆದ್ದಲ್ಲಿ ಪಾಯಿಂಟ್ಸ್​ ಮತ್ತು ರನ್​ರೇಟ್​ ಉತ್ತಮವಾಗಲಿದೆ. ಆಗ, ಲಖನೌ ವಿರುದ್ಧದ ಪಂದ್ಯದ ಫಲಿತಾಂಶದ ಮೇಲೆ ತಂಡದ ಹಣೆಬರಹ ಗೊತ್ತಾಗಲಿದೆ.

ಇತ್ತ ಆರ್​ಸಿಬಿ ಸತತ 5 ಸೋಲುಗಳನ್ನು ಕಂಡ ಬಳಿಕ ಟೂರ್ನಿಯಲ್ಲಿ ಎಲಿಮಿನೇಟ್​ ಆಗುವ ಮೊದಲ ತಂಡವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಫೀನಿಕ್ಸ್​ ಹಕ್ಕಿಯಂತೆ ಎದ್ದು ಬಂದ ಫಾಫ್​ ಡು ಪ್ಲೆಸಿಸ್​ ನೇತೃತ್ವದ ಪಡೆ ಸತತ 4 ಗೆಲುವು ದಾಖಲಿಸಿತು. ಆಡಿರುವ 12ರಲ್ಲಿ 5 ಪಂದ್ಯ ಗೆದ್ದಿದ್ದು, 7ರಲ್ಲಿ ಸೋತು 10 ಪಾಯಿಂಟ್ಸ್​ ಹೊಂದಿದೆ. ಆರ್​​ಆರ್ ವಿರುದ್ಧ ಇಂದು ಚೆನ್ನೈ ಸೋಲಬೇಕು. ಡೆಲ್ಲಿ ವಿರುದ್ಧ ದೊಡ್ಡ ಅಂತರದಲ್ಲಿ ತಾನು ಗೆಲ್ಲಬೇಕು. ಕೊನೆಯ ಪಂದ್ಯ ಸಿಎಸ್​ಕೆ ವಿರುದ್ಧ ನಡೆಯಲಿದ್ದು, ಅಲ್ಲಿ ಗೆಲುವೊಂದೇ ಮಂತ್ರವಾಗಿದೆ. ಆಗ ಮಾತ್ರ ಪ್ಲೇಆಫ್​ ಹಾದಿಯಲ್ಲಿ ಉಳಿಯಲು ಸಾಧ್ಯ.

ಮೊದಲ ಪಂದ್ಯ:ಚೆನ್ನೈ ಸೂಪರ್​ ಕಿಂಗ್ಸ್​ v/s ರಾಜಸ್ಥಾನ ರಾಯಲ್ಸ್​

ಸಮಯ, ಸ್ಥಳ: ಚೆಪಾಕ್ ಕ್ರೀಡಾಂಗಣ, ಚೆನ್ನೈ, ಮಧ್ಯಾಹ್ನ 3.30ಕ್ಕೆ

ಎರಡನೇ ಪಂದ್ಯ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು v/s ಡೆಲ್ಲಿ ಕ್ಯಾಪಿಟಲ್ಸ್​

ಸಮಯ, ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು, ಸಂಜೆ 7.30ಕ್ಕೆ

ಇದನ್ನೂ ಓದಿ:ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇ ಆಫ್‌ ಪ್ರವೇಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ - KKR Beat MI

ABOUT THE AUTHOR

...view details