ಹೈದರಾಬಾದ್:ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದುಃಸ್ವಪ್ನವಾಗಿ ಪರಿಣಮಿಸಿತ್ತು. ಏಕೆಂದರೆ, ತಾನು ಆಡಿದ್ದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಎಸ್‌ಆರ್‌ಹೆಚ್ ಪಡೆದಿತ್ತು. ಬ್ಯಾಟಿಂಗ್ ವೈಫಲ್ಯದಿಂದ ತಂಡವು ಚುಟುಕು ಟೂರ್ನಿಯ ಅಭಿಯಾನವನ್ನು ತೀರ ನೀರಸವಾಗಿ ಮುಗಿಸಿತ್ತು.
ಎಸ್‌ಆರ್‌ಹೆಚ್ ಪರ ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ 49.77 ಸರಾಸರಿಯೊಂದಿಗೆ 448 ರನ್ ಗಳಿಸಿ ತಂಡದ ಸ್ಟಾರ್ ಪರ್ಫಾರ್ಮರ್ ಆಗಿದ್ದರು. ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಕ್ರಮವಾಗಿ 16 ಮತ್ತು 12 ವಿಕೆಟ್ ಪಡೆದ್ದರು. ಆದರೆ, ಇತರ ಯಾವುದೇ ಬೌಲರ್‌ಗಳು ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ.
ಇದೀಗ ಈ ವರ್ಷ ಹರಾಜಿನಲ್ಲಿ ಫ್ರಾಂಚೈಸಿಯು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು 20.50 ಕೋಟಿ ರೂ.ಗಳಿಗೆ ಖರೀದಿಸಿದೆ. ಎಸ್‌ಆರ್‌ಎಚ್ ನಾಯಕರಾಗಿ ನೇಮಕಗೊಂಡಿರುವ ಆಸ್ಟ್ರೇಲಿಯದ ವೇಗಿ, ತಂಡದ ವೇಗದ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರನ್ನು ಹೊರತುಪಡಿಸಿ, ಆಸ್ಟ್ರೇಲಿಯಾದ ಸ್ಟಾರ್ ಟ್ರಾವಿಸ್ ಹೆಡ್ ಮತ್ತು ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗಾ ಸೇರಿದಂತೆ ಐದು ಆಟಗಾರರನ್ನು ಎಸ್‌ಆರ್‌ಹೆಚ್ ಖರೀದಿ ಮಾಡಿದೆ. ಪ್ರಸ್ತುತ ತಂಡದ SWOT (Strength - ಶಕ್ತಿ, Weakness - ದೌರ್ಬಲ್ಯ, Opportunities - ಅವಕಾಶಗಳು, Threat - ಬೆದರಿಕೆ) ವಿಶ್ಲೇಷಣೆ ಹೀಗಿದೆ.
ಎಸ್‌ಆರ್‌ಹೆಚ್ ತಂಡದ ಶಕ್ತಿ: ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್, ಗ್ಲೆನ್ ಫಿಲಿಪ್ಸ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಒಳಗೊಂಡಂತೆ ಸಾಗರೋತ್ತರ ತಾರೆಗಳು 'ಆರೆಂಜ್ ಆರ್ಮಿ'ಯ ದೊಡ್ಡ ಶಕ್ತಿಯಾಗಿದ್ದಾರೆ. ಮಾರ್ಕ್ರಾಮ್ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದರೆ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಹೆನ್ರಿಚ್ ಕ್ಲಾಸೆನ್ ಮತ್ತು ಗ್ಲೆನ್ ಫಿಲಿಪ್ಸ್ ಬಲ ತುಂಬಬೇಕು.
ಮಾರ್ಕೊ ಜಾನ್ಸೆನ್ ಮತ್ತು ಪ್ಯಾಟ್ ಕಮ್ಮಿನ್ಸ್ ಕೈಯಲ್ಲಿ ಹೊಸ ಚೆಂಡು ಮಾರಕವಾಗಬಹುದು. ಹೊಸ ಬಾಲ್ ಬೌಲರ್‌ಗಳು ತಂಡದ ಶಕ್ತಿಯ ಮತ್ತೊಂದು ಕೇಂದ್ರವಾಗಿದೆ. ಭುವನೇಶ್ವರ್ ಕುಮಾರ್, ಜಾನ್ಸೆನ್ ಮತ್ತು ಕಮ್ಮಿನ್ಸ್ ಹೊಸ ಚೆಂಡಿನೊಂದಿಗೆ ಪರಿಣಾಮಕಾರಿಯಾಗಿರುತ್ತಾರೆ. ಅಲ್ಲದೇ, ಟ್ರಾವಿಸ್ ಹೆಡ್ ಸೇರ್ಪಡೆಯೊಂದಿಗೆ ತಂಡವು ಅಗ್ರಸ್ಥಾನದಲ್ಲಿ ಸ್ಫೋಟಕ ಆರಂಭಿಕರನ್ನು ಹೊಂದಿರುತ್ತದೆ.