ಕರ್ನಾಟಕ

karnataka

ETV Bharat / sports

ಕಿಂಗ್ಸ್​ ಮಣಿಸಿದ 'ಕಿಂಗ್'​: ಕೊಹ್ಲಿ ಅಬ್ಬರಕ್ಕೆ ಶರಣಾದ ಪಂಜಾಬ್, ಗೆಲುವಿನ ಖಾತೆ ತೆರೆದ ಆರ್​ಸಿಬಿ - RCB Victory

ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಆರ್​ಸಿಬಿ 4 ವಿಕೆಟ್​ಗಳ ಗೆಲುವು ಸಾಧಿಸಿತು.

ಐಪಿಎಲ್​2024: ಪಂಜಾಬ್​ ಕಿಂಗ್ಸ್​ ವಿರುದ್ದ ಕಿಂಗ್​ ಕೊಹ್ಲಿ ಅಬ್ಬರ; ಗೆಲುವಿನ ಖಾತೆ ತೆರೆದ ಆರ್​ಸಿಬಿ
ಐಪಿಎಲ್​2024: ಪಂಜಾಬ್​ ಕಿಂಗ್ಸ್​ ವಿರುದ್ದ ಕಿಂಗ್​ ಕೊಹ್ಲಿ ಅಬ್ಬರ; ಗೆಲುವಿನ ಖಾತೆ ತೆರೆದ ಆರ್​ಸಿಬಿ

By PTI

Published : Mar 26, 2024, 6:58 AM IST

Updated : Mar 26, 2024, 8:05 AM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್‌) ಪ್ರಸಕ್ತ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಗೆಲುವಿನ ಖಾತೆ ತೆರೆದಿದೆ. ಸೋಮವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ್ದ 176 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, ನಿಗದಿತ 19.2 ಓವರ್​ಗಳಲ್ಲಿ ಗುರಿ ತಲುಪುವ ಮೂಲಕ 4 ವಿಕೆಟ್‌ಗಳಿಂದ ರೋಚಕ ಗೆಲುವು ಪಡೆಯಿತು.

ವಿರಾಟ್ ಕೊಹ್ಲಿ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ಒಂದು ಹಂತದಲ್ಲಿ ಪಂದ್ಯ ಪಂಜಾಬ್ ಕಡೆಗೆ ಸಾಗುತ್ತಿರುವಂತೆ ಭಾಸವಾಯಿತಾದರೂ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ಪಂಜಾಬ್ ಕೈಯಿಂದ ಗೆಲುವನ್ನು ಕಸಿದುಕೊಂಡರು. ಈ ಮೂಲಕ ಫಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆರ್‌ಸಿಬಿ ಈ ಋತುವಿನಲ್ಲಿ ಮೊದಲ ಜಯಭೇರಿ ಬಾರಿಸಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸೋಲು ಕಂಡಿತ್ತು.

ನಿನ್ನೆಯ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ಕಿಂಗ್ಸ್​ ತಂಡದ ನಾಯಕ ಶಿಖರ್​ ಧವನ್​ (45), ಪ್ರಭ್​ಸಿಮ್ರಾನ್​ (25), ಸ್ಯಾಮ್​ ಕರ್ರನ್​ (23), ಜಿತೇಶ್​ ಶರ್ಮಾ (27), ಶಶಾಂಕ್​ ಸಿಂಗ್ ​(21) ರನ್‌ಗಳ ನೆರವಿನಿಂದ 20 ಓವರ್​​ಗಳಲ್ಲಿ ತಂಡ 6 ವಿಕೆಟ್​ ನಷ್ಟಕ್ಕೆ 176 ರನ್​ ಕಲೆ ಹಾಕಿತು. ಇದಕ್ಕುತ್ತರವಾಗಿ ಆರ್​ಸಿಬಿ ತಂಡದ 'ಚೇಸ್ ಮಾಸ್ಟರ್' ವಿರಾಟ್​ ಕೊಹ್ಲಿ (77) ಬಿರುಸಿನ ಅರ್ಧಶತಕ, ರಜತ್​ ಪಾಟೀದಾರ್‌ (18), ದಿನೇಶ್​ ಕಾರ್ತಿಕ್ ​(28*),ಮಹಿಪಾಲ್​ ಲೆಮ್ರಾರ್​ (17*)ಬ್ಯಾಟಿಂಗ್​ ಸಹಾಯದಿಂದ 19.2 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಅಂಕಪಟ್ಟಿಯಲ್ಲಿ ಆರ್​​ಸಿಬಿ ತಂಡ 6ನೇ ಸ್ಥಾನಕ್ಕೆ ತಲುಪಿದರೆ ಪಂಜಾಬ್​ ಕಿಂಗ್ಸ್​ 5ನೇ ಸ್ಥಾನದಲ್ಲಿದೆ.

ಚಿನ್ನಸ್ವಾಮಿಯಲ್ಲಿ ಕೊಹ್ಲಿ ದಾಖಲೆ:ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಪೂರೈಸುವ ಮೂಲಕ ಚಿನ್ನಸ್ವಾಮಿ ಕ್ರೀಡಾಂಗಣವೊಂದರಲ್ಲೇ ಐಪಿಎಲ್​ನಲ್ಲಿ 25ನೇ ಅರ್ಧಶತಕ ಸಿಡಿಸಿರುವ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಪಟ್ಟಿಯಲ್ಲಿ ವಾರ್ನರ್​ ಎರಡನೇ ಸ್ಥಾನದಲ್ಲಿದ್ದು ಇವರು ಹೈದರಾಬಾದ್​ನ ಮೈದಾನದಲ್ಲಿ 18 ಬಾರಿ ಫಿಫ್ಟಿ ಬಾರಿಸಿದ್ದಾರೆ. ಉಳಿದಂತೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿಡಿ 16, ವಾಂಖೆಡೆಯಲ್ಲಿ ರೋಹಿತ್​ ಶರ್ಮಾ 15 ಬಾರಿ ಈ ಸಾಧನೆ ಮಾಡಿದ್ದಾರೆ.

ಟಿ20ಯಲ್ಲಿ 100ನೇ ಫಿಫ್ಟಿ:ನಿನ್ನೆಯ ಪಂದ್ಯದಲ್ಲಿ 77 ರನ್​ಗಳ ಅದ್ಭುತ ಇನ್ನಿಂಗ್ಸ್​ ಆಡಿದ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 100ನೇ ಬಾರಿಗೆ 50+ ಸ್ಕೋರ್​ ಮಾಡಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು. ಈ ಸಾಧನೆ ಮಾಡಿದ ಮೊದಲನೇ ಭಾರತೀಯ ಮತ್ತು ವಿಶ್ವದ ಮೂರನೇ ಬ್ಯಾಟರ್​ ಎಂಬ ಮೈಲಿಗಲ್ಲು ತಲುಪಿದರು.

174ನೇ ಕ್ಯಾಚ್​ ಪಡೆದ ಕೊಹ್ಲಿ​:ಇದೇಪಂದ್ಯದಲ್ಲಿ ಎರಡು ಕ್ಯಾಚ್ ಪಡೆದ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 174ನೇ ಕ್ಯಾಚ್​ ಪಡೆದ ಸಾಧನೆಗೈದರು. ಇದರೊಂದಿಗೆ ಅತೀ ಹೆಚ್ಚು ಕ್ಯಾಚ್​ ಪಡೆದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಸುರೇಶ್​ ರೈನಾ 172 ಕ್ಯಾಚ್​ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಐಪಿಎಲ್​ 2024: ಮೇ 26 ರಂದು ಚೆನ್ನೈನಲ್ಲಿ ಫೈನಲ್​ ಸೇರಿ ಬಾಕಿ ಪಂದ್ಯಗಳ ವೇಳಾಪಟ್ಟಿ ಪ್ರಕಟ - ipl 2024

Last Updated : Mar 26, 2024, 8:05 AM IST

ABOUT THE AUTHOR

...view details