ಬೆಂಗಳೂರು:ಪ್ಲೇಆಫ್ ತಲುಪುವ ಹಠದಲ್ಲಿ ಆರ್ಸಿಬಿ ಪ್ರತೀ ಪಂದ್ಯದಲ್ಲೂ ಕೆಚ್ಚೆದೆಯ ಆಟವಾಡುತ್ತಿದೆ. ಸತತ ಸೋಲುಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ತಂಡ ಎಲ್ಲ ವೈಫಲ್ಯಗಳನ್ನು ಮೆಟ್ಟಿನಿಂತು ಅಭೂತಪೂರ್ವ ಗೆಲುವಿನ ಓಟ ಮುಂದುವರಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ರಾತ್ರಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 47 ರನ್ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಹತ್ತಿರಕ್ಕೆ ಬಂದಿದೆ. ಸತತ ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 9 ವಿಕೆಟ್ಗೆ 187 ರನ್ ಗಳಿಸಿತು. ಇದಕ್ಕುತ್ತರವಾಗಿ ಡೆಲ್ಲಿ 19.1 ಓವರ್ನಲ್ಲಿ 140 ರನ್ಗೆ ಆಲೌಟ್ ಆಯಿತು.
ಆರ್ಸಿಬಿ ಅಚ್ಚರಿಯ ಬೌಲಿಂಗ್ ಪ್ರದರ್ಶನ:ಭಾರೀ ಟೀಕೆಗೆ ಗುರಿಯಾಗಿದ್ದ ಆರ್ಸಿಬಿಯ ಬೌಲಿಂಗ್ ವಿಭಾಗ ಕಳೆದೆರಡು ಪಂದ್ಯಗಳಲ್ಲಿ ಸುಧಾರಿಸಿದೆ. ಅಚ್ಚರಿ ರೀತಿಯ ಫೀಲ್ಡಿಂಗ್ ಕೂಡ ಕಂಡುಬರುತ್ತಿದೆ. ಡೆಲ್ಲಿ 3.3 ಓವರ್ಗಳಲ್ಲಿ 30 ರನ್ಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಸಿಡಿಲಮರಿ ಜೇಕ್ ಫ್ರೇಸರ್ 21 ರನ್ಗೆ ವಿಕೆಟ್ ನೀಡಿದರೆ, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಡೇವಿಡ್ ವಾರ್ನರ್ 1, ಅಭಿಷೇಕ್ ಪೊರೆಲ್ 2 ರನ್ಗೆ ಪೆವಿಲಿಯನ್ ಸೇರಿದರು.
ಫಲ ನೀಡದ ಅಕ್ಷರ್ ಅಬ್ಬರ: ಸತತ ವಿಕೆಟ್ ಉರುಳಿಸಿದ ಆರ್ಸಿಬಿಗೆ ಸವಾಲಾಗಿದ್ದು ಅಕ್ಷರ್ ಪಟೇಲ್. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಅಕ್ಷರ್ 57 ರನ್ ಸಿಡಿಸಿದರು. ಶಾಯ್ ಹೋಪ್ 29 ರನ್ ಗಳಿಸಿದ್ದು ಎರಡನೇ ಅತ್ಯಧಿಕವಾಗಿತ್ತು. ಇಬ್ಬರೂ ಔಟಾದ ಬಳಿಕ ತಂಡ 140 ರನ್ಗೆ ದಿಢೀರ್ ಪತನಗೊಂಡಿತು.
ಗೆಲುವಿನ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ, 3 ಸಿಕ್ಸರ್ ಸಿಡಿಸುವ ಮೂಲಕ ರನ್ ಮಶಿನ್ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ನಿರೀಕ್ಷೆ ಮೂಡಿಸಿದರು. ಆದರೆ, ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ವಿಕೆಟ್ ನೀಡಿದರು. ಡುಪ್ಲೆಸಿಸ್ 6 ರನ್ಗೆ ಬಲಿಯಾದರು.
ಬಳಿಕ ಜೊತೆಗೂಡಿದ ವಿಲ್ ಜಾಕ್ಸ್ 41, ರಜತ್ ಪಾಟೀದಾರ್ 52 ಭರ್ಜರಿ ಬ್ಯಾಟ್ ಬೀಸಿದರು. ಕ್ಯಾಮರೂನ್ ಗ್ರೀನ್ 32 ರನ್ಗಳ ಕಾಣಿಕೆ ನೀಡಿದರು. ಬಳಿಕ ವಿಕೆಟ್ ಕಳೆದುಕೊಂಡಿದ್ದರಿಂದ 187 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್ಸಿಬಿ ಪ್ಲೇಆಫ್ ಹಾದಿ ಹೇಗಿದೆ?:ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಆರ್ಸಿಬಿಗೆ ಅದೃಷ್ಟವೇ ಕೈಹಿಡಿಯಬೇಕು. ಲೀಗ್ನಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಸಿಎಸ್ಕೆ ವಿರುದ್ಧ ಆಡಲಿದೆ. ಇಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. ಜೊತೆಗೆ ಲಖನೌ 2 ಪಂದ್ಯಗಳಲ್ಲಿ ಒಂದರಲ್ಲಿ ಕಡ್ಡಾಯವಾಗಿ ಸೋಲಬೇಕು.
ಇದನ್ನೂ ಓದಿ:IPL: ರಾಜಸ್ಥಾನ್ ವಿರುದ್ಧ ಗೆದ್ದ ಚೆನ್ನೈ ಪ್ಲೇಆಫ್ಗೆ ಮತ್ತಷ್ಟು ಸನಿಹ - CSK VS RR