ಗುವಾಹಟಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆರಂಭದಿಂದಲೂ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಇದೀಗ ಸೋಲಿನ ಸುಳಿಗೆ ಸಿಲುಕಿ ಹೊರಬರಲು ಪರದಾಡುತ್ತಿದೆ. ಈಗಾಗಲೇ ಪ್ಲೇ ಆಫ್ಗೆ ಅಧಿಕೃತವಾಗಿ ಅರ್ಹತೆ ಪಡೆದಿದ್ದರೂ ಸತತ ಸೋಲಿನಿಂದ ಮುಗ್ಗರಿಸಿದೆ.
ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ದದ ಔಪಚಾರಿಕ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ಗಳಿಂದ ಹೀನಾಯ ಸೋಲನುಭವಿಸಿತು. ಮತ್ತೊಂದೆಡೆ, ನಾಕೌಟ್ ರೇಸ್ನಿಂದ ಹೊರಬಿದ್ದಿರುವ ಪಂಜಾಬ್ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿತು.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸ್ಯಾಮ್ಸನ್ ಟೀಂ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು. ತಂಡದ ಪರ ರಿಯಾನ್ ಪರಾಗ್ 48 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ, ಜೈಸ್ವಾಲ್ (4), ಕ್ಯಾಡ್ಮೊರ್ (18), ಸ್ಯಾಮ್ಸನ್ (18), ಅಶ್ವಿನ್ (28), ಧ್ರುವ್ ಜುರೆಲ್ (0), ಪೊವೆಲ್ (4), ಫೆರೆರಿಯಾ (7), ಬೌಲ್ಟ್ (7), ಆವೇಶ್ ಖಾನ್ (3) ರನ್ ಕಲೆ ಹಾಕಿದರು.