ಚಿಕ್ಕಮಗಳೂರು : ಸರಣಿ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಖದೀಮರನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 18ರ ರಾತ್ರಿ ಬಾಳೆಹೊನ್ನೂರು ಪಟ್ಟಣದ ಮುಬಾರಕ್ ಹುಸೇನ್ ಎಂಬುವರ ಅಂಗಡಿಯ ಬೀಗ ಮುರಿದು 20 ಸಾವಿರ ನಗದು, ಎರಡು ದುಬಾರಿ ಮೌಲ್ಯದ ವಾಚ್ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕಳ್ಳರು ಎಗರಿಸಿದ್ದರು.
ಅಲ್ಲದೆ ಎದುರುಗಡೆ ಇದ್ದ ಕಲ್ಮಕ್ಕಿ ವೈನ್ ಶಾಪ್ನ ಬೀಗ ಒಡೆದು ಮೂರು ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕಳವು ಮಾಡಿ, ಮತ್ತೊಂದು ದಿನಸಿ ಅಂಗಡಿಯ ರೋಲಿಂಗ್ ಶೆಟರ್ ಮುರಿದು ಎರಡು ಸಾವಿರ ನಗದು ಎಗರಿಸಿ ಕಳ್ಳರು ಕೈಚಳಕ ತೋರಿದ್ದರು.
ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಬಾಳೆಹೊನ್ನೂರು ಪಿಎಸ್ಐ ರವೀಶ್ ಹಾಗೂ ಸಿಬ್ಬಂದಿ, ಚಿತ್ರದುರ್ಗ ಮೂಲದ ಕರುಣ ಹಾಗೂ ಹಸೈನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ 3.50 ಲಕ್ಷ ನಗದು, 4.10 ಲಕ್ಷ ಮೌಲ್ಯದ ವಸ್ತುಗಳು ಸೇರಿದಂತೆ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಇನ್ನೂ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.
ಚಲಿಸುತ್ತಿದ್ದ ರೈಲಿನಲ್ಲಿ ಸರಗಳ್ಳತನ ಮಾಡುತ್ತಿದ್ದವನ ಬಂಧನ : ಶಿವಮೊಗ್ಗದ ರೈಲ್ವೆ ಪೊಲೀಸರು ಚಲಿಸುತ್ತಿದ್ದ ರೈಲಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು 3 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ರೈಲು ನಿಲ್ದಾಣದಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಿಟ್ಯಾನ್ ತಾಂಡದ ನಿವಾಸಿ ಧರ್ಮ ನಾಯ್ಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಕಳೆದ ಮೂರು ದಿನದ ಹಿಂದೆ ಮೈಸೂರು- ತಾಳಗುಪ್ಪದ ರೈಲು ಸಂಖ್ಯೆ 16228 ನಲ್ಲಿ ಸರಗಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಡಿಸೆಂಬರ್ 23 ರಂದು ರೈಲಿನಲ್ಲಿ ಸರಗಳ್ಳತನವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆರೋಪಿಯ ಹುಡುಕಾಟಕ್ಕೆ ಶೋಧ ನಡೆಸುತ್ತಿದ್ದರು. ಈ ವೇಳೆ ಧರ್ಮನಾಯ್ಕ್ ಆನಂದಪುರಂ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಟ ಮಾಡುತ್ತಿರುತ್ತಾನೆ. ಈತನನ್ನು ಮೊದಲು ಮಾತನಾಡಿಸಿದಾಗ ಆತ ಸರಿಯಾದ ಉತ್ತರ ನೀಡಿರುವುದಿಲ್ಲ. ಇದರಿಂದ ಅನುಮಾನಗೊಂಡ RPF ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೈಸೂರು- ತಾಳಗುಪ್ಪ ರೈಲಿನಲ್ಲಿ ನಡೆದ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಧರ್ಮನಾಯ್ಕ್ ಕಳೆದ 7 ತಿಂಗಳ ಹಿಂದೆ ಬೆಂಗಳೂರಿನ ಹೆಜ್ಜಾಲದ ಬಳಿ ರೈಲಿನಲ್ಲಿ ಮಾಂಗಲ್ಯ ಸರ ಕದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ. ಧರ್ಮನಾಯ್ಕ್ ನನ್ನು ಬಂಧಿಸಿ ಸಾಗರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಅಕ್ಕ, ತಂಗಿಯರ ಬಂಧನ - THEFT ACCUSED ARRESTED