ಪೋರ್ಟ್ ಲೂಯಿಸ್ (ಮಾರಿಷಸ್) : ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ನೆರೆಯ ಮಾರಿಷಸ್ ಸರ್ಕಾರ ಸಂತಾಪ ಸೂಚಿಸಿದೆ. ಅವರ ಅಂತ್ಯಕ್ರಿಯೆ ಹಿನ್ನೆಲೆ ಶನಿವಾರ ಇಡೀ ದಿನ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ಸಲ್ಲಿಸಿದೆ.
ಭಾರತದ ಮಾಜಿ ಪ್ರಧಾನಿಗೆ ಗೌರವ ಸೂಚಿಸಲು ಶನಿವಾರ ಸೂರ್ಯಾಸ್ತದವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲಿನ ಮಾರಿಷಸ್ ಧ್ವಜವನ್ನು ಅರ್ಧಕ್ಕೆ ಹಾರಿಸಲು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ಹೊರಡಿಸಿತ್ತು.
ಅಂತ್ಯಕ್ರಿಯೆಯಲ್ಲಿ ವಿದೇಶಾಂಗ ಸಚಿವ ಭಾಗಿ: ಶನಿವಾರ ಜರುಗಿದ ಆರ್ಥಿಕ ತಜ್ಞನ ಅಂತ್ಯಕ್ರಿಯೆಯಲ್ಲಿ ಮಾರಿಷಸ್ ಸರ್ಕಾರದ ವಿದೇಶಾಂಗ ಸಚಿವ ಧನಂಜಯ್ ರಾಮ್‌ಫುಲ್ ಅವರು ಭಾಗವಹಿಸಿದ್ದರು. ದೆಹಲಿಗೆ ಆಗಮಿಸಿದ್ದ ಅವರು, ಡಾ. ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಮನಮೋಹನ್ ಸಿಂಗ್ ಅವರ ಸಾವಿನ ಸುದ್ದಿ ತಿಳಿದ ಮಾರಿಷಸ್ ಪ್ರಧಾನಿ ನವೀನ್ ರಾಮಗೂಲಂ ಅವರು ರಾಜಧಾನಿ ಪೋರ್ಟ್ ಲೂಯಿಸ್‌ನಲ್ಲಿರುವ ಭಾರತದ ಹೈಕಮಿಷನ್‌ಗೆ ಶುಕ್ರವಾರ ಭೇಟಿ ನೀಡಿ, ಅಲ್ಲಿದ್ದ ಸಿಂಗ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಬಳಿಕ ಸಂತಾಪ ಪುಸ್ತಕದಲ್ಲಿ ಸಹಿ ಹಾಕಿದರು. ಮಾರಿಷಸ್‌ನಲ್ಲಿರುವ ಭಾರತೀಯ ಹೈ ಕಮಿಷನ್ ಈ ಚಿತ್ರಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಂತಾಪ ಸೂಚಿಸಿದ ಪ್ರಧಾನಿ: ಮಾರಿಷಸ್ ಪ್ರಧಾನಿ ರಾಮಗೂಲಂ ಅವರು ಫೇಸ್‌ಬುಕ್‌ನಲ್ಲಿ ಸಂತಾಪ ಸೂಚಿಸಿದ್ದು, "ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ವಾರ್ತೆ ನನಗೆ ತೀವ್ರ ದುಃಖ ತರಿಸಿದೆ. 2005 ರಲ್ಲಿ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಮತ್ತು ಅವರು ಇಲ್ಲಿಗೆ ಬಂದಾಗ ಮೊದಲ ಬಾರಿಗೆ ಭೇಟಿ ಆಗಿದ್ದೆ. ಡಾ.ಸಿಂಗ್ ಒಬ್ಬ ಸಜ್ಜನ ರಾಜಕಾರಣಿ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು ಎಂದು ಗುಣಗಾನ ಮಾಡಿದ್ದಾರೆ.
ಭಾರತದ ಆರ್ಥಿಕ ಸ್ಥಿತಿಯನ್ನೇ ಬದಲಿಸಿದ ಮೇಧಾವಿ. ಅವರ ನಮ್ರತೆ, ಸಮಗ್ರ ದೃಷ್ಟಿಕೋನ ಮತ್ತು ಶಾಂತಚಿತ್ತತೆ ಸ್ಮರಣೀಯ. ಮಾರಿಷಸ್ ನಾಗರಿಕರು ಮತ್ತು ನನ್ನ ಸರ್ಕಾರದ ಪರವಾಗಿ ಅವರ ಕುಟುಂಬಸ್ಥರು ಮತ್ತು ಆಪ್ತರಿಗೆ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 92 ವರ್ಷದ ಡಾ. ಸಿಂಗ್ ಅವರು, ಡಿಸೆಂಬರ್ 26 ರಂದು ಏಮ್ಸ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯು ಶನಿವಾರ ಇಂದು ದೆಹಲಿಯ ಕಾಶ್ಮೀರ್ ಗೇಟ್‌ನಲ್ಲಿರುವ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಇದನ್ನೂ ಓದಿ: 'ನನ್ನ ತಂದೆಗೆ ಕನಿಷ್ಠ ಸಂತಾಪ ಸಭೆ ನಡೆಸಲಿಲ್ಲ': ಕಾಂಗ್ರೆಸ್ ವಿರುದ್ಧ ಪ್ರಣಬ್ ಮುಖರ್ಜಿ ಪುತ್ರಿ ಕಿಡಿ