ಮುಂಬೈ(ಮಹಾರಾಷ್ಟ್ರ):ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿ ತಂಡ ಮುಂಬೈ ವಿರುದ್ಧ 196 ರನ್ಗಳನ್ನು ಕಲೆ ಹಾಕಿತು. ಮುಂಬೈ ಪರ ಜಸ್ಪೀತ್ ಬೂಮ್ರಾ 5 ವಿಕೆಟ್ ಪಡೆದು ಮಿಂಚಿದರೂ, ಕೊನೆಯಲ್ಲಿ ಕಾರ್ತಿಕ್ ಅಬ್ಬರದಿಂದಾಗಿ ಸವಾಲಿನ ಮೊತ್ತ ಪೇರಿಸುವಲ್ಲಿ ಬೆಂಗಳೂರು ಯಶಸ್ವಿಯಾಯಿತು. ಮುಂಬೈ ತನ್ನ ಗೆಲುವಿಗಾಗಿ 197 ರನ್ಗಳನ್ನು ಚೇಸ್ ಮಾಡಬೇಕಿದೆ.
ಇದಕ್ಕೂ ಮುನ್ನ, ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಇದರಿಂದ ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭದಲ್ಲೇ ಮುಂಬೈ ವೇಗಿ ಜಸ್ಪೀತ್ ಬೂಮ್ರಾ ಎದುರಾಳಿ ತಂಡಕ್ಕೆ ಶಾಕ್ ನೀಡಿದರು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಮೂರು ರನ್ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ವಿಲ್ ಜಾಕ್ಸ್ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ ನಿರಾಸೆ ಮೂಡಿಸಿದರು. ಎಂಟು ರನ್ ಕಲೆ ಹಾಕಿ ನಿರ್ಗಮಿಸಿದರು. ಈ ಇಬ್ಬರು ಬೂಮ್ರಾ ಬೌಲಿಂಗ್ನಲ್ಲಿ ಕ್ಯಾಚಿತ್ತರು.
ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ಆಸರೆಯಾದರು. ಮೂರನೇ ವಿಕೆಟ್ಗೆ ಈ ಜೋಡಿ 82 ರನ್ಗಳ ಜತೆಯಾಟ ನೀಡಿ ತಂಡವನ್ನು ಆಘಾತದಿಂದ ಮೇಲೆತ್ತಿದರು. ಆದರೆ, ಉತ್ತಮವಾಗಿ ಬ್ಯಾಟರ್ ಬೀಸುತ್ತಿದ್ದ ಪಾಟಿದಾರ್ ತಮ್ಮ ಅರ್ಧಶತಕ (50) ಪೂರೈಸುತ್ತಿದ್ದಂತೆ ವಿಕೆಟ್ ಒಪ್ಪಿಸಿ ನಿರ್ಮಿಸಿದರು. ನಂತರ ಬಂದ ಮ್ಯಾಕ್ಸ್‌ವೆಲ್ ಶೂನ್ಯ ಸುತ್ತಿದರು. ಮತ್ತೊಂದೆಡೆ, ಆರಂಭಿಕ ಡು ಪ್ಲೆಸಿಸ್ 61 ರನ್ ಬಾರಿಸಿ ಔಟಾದರು.
ಮ್ಯಾಕ್ಸ್‌ವೆಲ್ ನಂತರ ಬಂದ ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 23 ಬಾಲ್ಗಳಲ್ಲಿ ನಾಲ್ಕು ಸಿಕ್ಸರ್, ಐದು ಬೌಂಡರಿಗಳ ಸಮೇತವಾಗಿ 53 ರನ್ ಸಿಡಿಸಿದರು. ಅದರಲ್ಲೂ, ಕೊನೆಯ ಓವರ್ಗಳನ್ನು ಸತತವಾಗಿ ಎರಡು ಸಿಕ್ಸರ್, ಒಂದು ಬೌಂಡರಿ ಬಾರಿಸಿ ಅಜೇಯರಾಗಿ ಉಳಿದರು. ಇದರಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 196 ರನ್ ಕಲೆ ಹಾಕಿತು.