ಜೆರುಸಲೇಮ್ (ಇಸ್ರೇಲ್): ಇಸ್ರೇಲ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು ಸಿರಿಯಾ - ಲೆಬನಾನ್ ಗಡಿಯಲ್ಲಿನ ಜಂತಾ ಕ್ರಾಸಿಂಗ್ನಲ್ಲಿ ಮೂಲಸೌಕರ್ಯಗಳ ಮೇಲೆ ಶುಕ್ರವಾರ ದಾಳಿ ನಡೆಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ವರದಿ ಮಾಡಿದೆ.
ಈ ದಾಳಿಗಳು ಸಿರಿಯನ್ ಪ್ರದೇಶದಿಂದ ಲೆಬನಾನ್ ಪ್ರದೇಶಕ್ಕೆ ಶಸ್ತ್ರಾಸ್ತ್ರಗಳ ವರ್ಗಾವಣೆಯನ್ನು ತಡೆಯುವ ಇಸ್ರೇಲ್ ರಕ್ಷಣಾ ಪಡೆಯ ಪ್ರಯತ್ನದ ಮತ್ತೊಂದು ಭಾಗವಾಗಿದೆ ಮತ್ತು ಶಸ್ತ್ರಾಸ್ತ್ರಗಳ ವರ್ಗಾವಣೆ ಮಾಡಲು ಭಯೋತ್ಪಾದಕ ಸಂಘಟನೆ ಹೆಜ್ಬೊಲ್ಲಾಗೆ ಕಷ್ಟವಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.
ಈ ಪ್ರಯತ್ನಗಳಲ್ಲಿ ಹಿಜ್ಬುಲ್ಲಾದ ಯುನಿಟ್ 4400 ರ ಕಮಾಂಡರ್ ಮುಹಮ್ಮದ್ ಜಫರ್ ಕಟ್ಜಿರ್ ಅವರ ಹತ್ಯೆಯೂ ಒಳಗೊಂಡಿದೆ.
ಇಸ್ರೇಲಿ ಯುದ್ಧ ವಿಮಾನಗಳು ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಹೌತಿ ಉಗ್ರರು ಬಳಸುವ ಮೂಲಸೌಕರ್ಯಗಳು ಮತ್ತು ಹೌತಿ ನಿಯಂತ್ರಿತ ಪ್ರದೇಶಗಳಲ್ಲಿರುವ ಹೆಜ್ಯಾಜ್ ಮತ್ತು ರಾಸ್ ಕನಾಟಿಬ್ ವಿದ್ಯುತ್ ಸ್ಥಾವರಗಳು ಮತ್ತು ಪಶ್ಚಿಮ ಕರಾವಳಿಯ ಹೊದೈಡಾ, ಸಾಲಿಫ್ ಮತ್ತು ರಾಸ್ ಕನಾಟಿಬ್ ಬಂದರುಗಳ ಮೇಲೆ ಗುರುವಾರ ದಾಳಿ ನಡೆಸಿದವು. ಈ ಬಂದರುಗಳ ಮೂಲಕವೇ ಇರಾನ್ ಹೌತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಹೌತಿ ನಾಯಕ ಅಬ್ದುಲ್-ಮಲಿಕ್ ಅಲ್-ಹೌತಿ ಟಿವಿಯಲ್ಲಿ ಕಾಣಿಸಿಕೊಂಡು ಭಾಷಣ ಮಾಡುತ್ತಿರುವಾಗಲೇ ಇಸ್ರೇಲ್ ದಾಳಿ ನಡೆಸಿರುವುದು ಗಮನಾರ್ಹ. ಸನಾ ಮತ್ತು ಹೊದೈದಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ತೀವ್ರ ವಾಯು ದಾಳಿ ನಡೆಸಿದೆ ಎಂದು ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮುಂದುವರಿದ ಆಂತರಿಕ ಕಲಹ: ಉಗ್ರರ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರ ಸಾವು