ಮುಂಬೈ , ಮಹಾರಾಷ್ಟ್ರ: ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇತ್ತೀಚೆಗೆ ಕುರ್ಲಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಏಳರಿಂದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಕುರ್ಲಾದ ಈ ಅಪಘಾತದ ನೆನಪು ಮಾಸುವ ಮುನ್ನವೇ ಶುಕ್ರವಾರ ರಾತ್ರಿ ಕುರ್ಲಾ ಪಕ್ಕದ ಘಾಟ್‌ಕೋಪರ್‌ನಲ್ಲಿ ಭಾರಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟೆಂಪೋ ಐವರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಈ ಅಪಘಾತದ ನಂತರ ಟೆಂಪೋ ಚಾಲಕ ಉತ್ತಮ್ ಖಾರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು ಮೃತ ಮಹಿಳೆಯನ್ನು ಪ್ರೀತಿ ಪಟೇಲ್ (ವಯಸ್ಸು 35, ಪಶ್ಚಿಮದ ಘಾಟ್‌ಕೋಪರ್ ನಿವಾಸಿ) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರೇಷ್ಮಾ ಶೇಖ್, ಮಾರುಫಾ ಶೇಖ್, ಮೊಹಮ್ಮದ್ ಅಲಿ ಅಬ್ದುಲ್ ಶೇಖ್, ಓಜರ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಟೆಂಪೋ ಸಂಜೆ 6.30 ರ ಸುಮಾರಿಗೆ ನಾರಾಯಣನಗರದಿಂದ ತಂಪು ಪಾನೀಯಗಳೊಂದಿಗೆ ಬರುತ್ತಿದ್ದು, ಅತಿವೇಗದಲ್ಲಿ ಚಲಿಸುತ್ತಿತ್ತು. ಸ್ಟೇರಿಂಗ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ವಲಯ ಉಪ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವುದೇನು?: ಪ್ರತ್ಯಕ್ಷದರ್ಶಿಗಳ ಪ್ರಕಾರ ಆರೋಪಿಯನ್ನು ಸಾರ್ವಜನಿಕರು ಹಿಡಿದು ಘಾಟ್‌ಕೋಪರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿರಾಗ್ ನಗರದಲ್ಲಿ ದೊಡ್ಡ ಮಾರುಕಟ್ಟೆ ಇದೆ. ತರಕಾರಿ ಮತ್ತು ಮೀನು ಮಾರುಕಟ್ಟೆಗಳು ಜನಸಂದಣಿ ತುಂಬಿದ್ದು, ಭಾರಿ ಸಂಖ್ಯೆಯಲ್ಲಿ ನಾಗರಿಕರು ಬಂದು ಹೋಗುತ್ತಾರೆ. ಹಾಗಾಗಿ ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎನ್ನುತ್ತಾರೆ ಸ್ಥಳೀಯರು. ಆದರೆ, ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಇದನ್ನು ಓದಿ:ಕೀಟಗಳನ್ನೇ ಬೇಟೆಯಾಡುವ ಬೇಟೆಗಾರ! ಚಹಾ ಕೃಷಿಗೆ ಕಂಟಕವಾದ ಕೀಟಗಳ ನಿಯಂತ್ರಣಕ್ಕೆ ಹೊಸ ಪ್ರಯೋಗ