ಮುಂಬೈ:ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಬಿಬಿಸಿಸಿಐ ಪಂದ್ಯದ ಶೇ.30ರಷ್ಟು ದಂಡದೊಂದಿಗೆ ಐಪಿಎಲ್ 2025ರ ಒಂದು ಪಂದ್ಯಕ್ಕೆ ನಿಷೇಧ ವಿಧಿಸಿದೆ.
ಶುಕ್ರವಾರ (ನಿನ್ನೆ) ವಾಂಖೆಡೆಯಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋಲನುಭವಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ನಿಕೋಲಸ್ ಪೂರನ್ (75) ಮತ್ತು ಕೆಎಲ್ ರಾಹುಲ್ (55) ಅರ್ಧಶತಕಗಳ ನೆರವಿನಿಂದ ತಂಡ ಬೃಹತ್ ಮೊತ್ತ ಪೇರಿಸಿತು.
ಇದಕ್ಕುತ್ತರವಾಗಿ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 196 ರನ್ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ರೋಹಿತ್ ಶರ್ಮಾ (68) ಮತ್ತು ನಮನ್ ಧೀರ್ (62) ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಸೋಲಿನೊಂದಿಗೆ ಮುಂಬೈ ತನ್ನ ಐಪಿಎಲ್ ಅಭಿಯಾನವನ್ನು ಕೊನೆಗೊಳಿಸಿತು.
ಆದರೆ ಈ ಪಂದ್ಯದಲ್ಲಿ ಮುಂಬೈನ ನಿಧಾನಗತಿಯ ಓವರ್ರೇಟ್ ನಿಂದಾಗಿ ನಾಯಕ ಹಾರ್ದಿಕ್ ಪಾಂಡ್ಯಗೆ ₹30 ಲಕ್ಷ ದಂಡದೊಂದಿಗೆ ಮುಂದಿನ ಸೀಸನ್ನ ಪಂದ್ಯವೊಂದರಿಂದ ನಿಷೇಧ ಹೇರಲಾಗಿದೆ.
ಈ ಬಗ್ಗೆ ಐಪಿಎಲ್ ಹೊರಡಿಸಿದ ಹೇಳಿಕೆಯ ಪ್ರಕಾರ, "ಮೇ 17ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ನಿಂದಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದರಿಂದಾಗಿ ಅವರಿಗೆ ಪಂದ್ಯದ ಶೇ.30 ರಷ್ಟು ದಂಡದೊಂದಿಗೆ 2025ರ ಐಪಿಎಲ್ ಪಂದ್ಯವೊಂದರಿಂದ ನಿಷೇಧ ಹೇರಲಾಗಿದೆ" ಎಂದು ತಿಳಿಸಿದೆ.
ಪ್ರಸಕ್ತ ಋತುವಿನಲ್ಲಿ ನಿಧಾನಗತಿಯ ಓವರ್ನಿಂದಾಗಿ ಹಾರ್ದಿಕ್ ಪಾಂಡ್ಯ ಮೂರನೇ ಬಾರಿಗೆ ದಂಡಕ್ಕೆ ಗುರಿಯಾಗಿದ್ದಾರೆ. ಆರಂಭದಲ್ಲಿ ಅವರಿಗೆ ಎರಡು ಬಾರಿ ದಂಡ ವಿಧಿಸಲಾಗಿತ್ತು. ಆದರೆ, ಐಪಿಎಲ್ ನಿಯಮಗಳ ಪ್ರಕಾರ ಮೂರನೇ ಬಾರಿಯೂ ನಿಧಾನಗತಿಯ ಓವರ್ ಕಂಡು ಬಂದ ಕಾರಣ ಈ ಕ್ರಮ ಜರುಗಿಸಲಾಗಿದೆ. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ನ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಹಾಗಾಗಿ ಐಪಿಎಲ್ 2025ರ ಮೊದಲ ಪಂದ್ಯಕ್ಕೆ ಹಾರ್ದಿಕ್ ಮೇಲೆ ನಿಷೇಧ ಹೇರಲಾಗಿದೆ.
ನಿಷೇಧಕ್ಕೊಳಗಾದ 2ನೇ ನಾಯಕ:ಪ್ರಸಕ್ತ ಲೀಗ್ನಲ್ಲಿಹಾರ್ದಿಕ್ ಪಾಂಡ್ಯ ಪಂದ್ಯವೊಂದಕ್ಕೆ ನಿಷೇಧಕ್ಕೊಳಗಾದ ಎರಡನೇ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಕೂಡ ನಿಧಾನಗತಿಯ ಓವರ್ನಿಂದಾಗಿ 1 ಪಂದ್ಯದಿಂದ ನಿಷೇಧಿಸಿಲ್ಪಟ್ಟಿದ್ದರು. ಇದರಿಂದಾಗಿ ಅವರು ಆರ್ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ:IPL 2024: ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಲಕ್ನೋ - LSG Beat MI